ದರ್ಶನ್‌, ಗ್ಯಾಂಗ್‌ಗೆ ಮತ್ತೆ ಶಾಕ್‌ – ಜಾಮೀನು ರದ್ದು ಕೋರಿ ಸುಪ್ರೀಂಗೆ ಮೇಲ್ಮನವಿ ಸಲ್ಲಿಕೆ

ಬೆಂಗಳೂರು: ಸದ್ಯ ಜಾಮೀನಿನ ಮೇಲೆ ಹೊರಗಿರುವ ಕೊಲೆ ಆರೋಪಿ, ನಟ ದರ್ಶನ್‌ (Darshan) ಮತ್ತು ಗ್ಯಾಂಗ್‌ಗೆ ಮತ್ತೆ ಸಂಕಷ್ಟ ಎದುರಾಗಿದೆ. ದರ್ಶನ್‌ ಸೇರಿ ಇತರ 7 ಆರೋಪಿಗಳ ಜಾಮೀನು ರದ್ದು ಕೋರಿ ಸುಪ್ರೀಂ ಕೋರ್ಟ್‌ಗೆ (Supreme Court) ಪೊಲೀಸರು ಮೇಲ್ಮನವಿ ಸಲ್ಲಿಸಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಇಂದು ಪೊಲೀಸರು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಸುಪ್ರೀಂ ಕೋರ್ಟ್ ವಕೀಲ ಅನಿಲ್ ಸಿ ನಿಶಾನಿಯಿಂದ ಅರ್ಜಿ ಸಲ್ಲಿಕೆಯಾಗಿದ್ದು, ನಟ ದರ್ಶನ್, ಪವಿತ್ರಗೌಡ, ಲಕ್ಷ್ಮಣ್, ಪ್ರದೂಶ್, ನಾಗರಾಜು, ಅನುಕುಮಾರ್ ಹಾಗೂ ಜಗದೀಶ್ ಆರೋಪಿಗಳ ಜಾಮೀನು ರದ್ದು ಮಾಡಿವಂತೆ ಮನವಿ ಮಾಡಿದ್ದಾರೆ.

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೂ.11 ರಂದು ನಟ ದರ್ಶನ್‌ ಸೇರಿ ಹಲವರು ಬಂಧನಕ್ಕೊಳಗಾಗಿದ್ದರು. ಕಳೆದ ಡಿಸೆಂಬರ್‌ 13ರಂದು ರಾಜ್ಯ ಹೈಕೋರ್ಟ್‌ ದರ್ಶನ್‌ ಸೇರಿ 7 ಆರೋಪಿಗಳಿಗೂ ಜಾಮೀನು ಮಂಜೂರು ಮಾಡಿತ್ತು. ಇದನ್ನೂ ಓದಿ: Ramanagara | ಸ್ನೇಹಿತನನ್ನು ಕೊಲೆಗೈದ ಪ್ರಕರಣ – ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ, 50,000 ರೂ. ದಂಡ

ಜಾಮೀನು ಸಿಕ್ಕಿದ್ದು ಹೇಗೆ?
ಜಾಮೀನು ಮೊದಲ ನಿಯಮ. ಆರೋಪಿಗಳಿಗೆ ಯಾವುದೇ ಅಪರಾಧಿಕ ಹಿನ್ನೆಲೆ ಇಲ್ಲ. ಆರೋಪಿಗಳು 6 ತಿಂಗಳಿನಿಂದ ಜೈಲಿನಲ್ಲಿ ಇದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿದೆ. ಬಂಧನ ಮಾಡುವಾಗ ನಿಯಮಗಳ ಪಾಲನೆ ಆಗಿಲ್ಲ. ಬಂಧನ ವೇಳೆ ಆರೋಪಿಗೆ ಬಂಧನದ ಕಾರಣ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟ ಆದೇಶವಿದೆ. ಆದರೆ ಈ ಪ್ರಕರಣದಲ್ಲಿ ಪೊಲೀಸರು ಗ್ರೌಂಡ್ಸ್ ಆಫ್ ಅರೆಸ್ಟ್ ಪಾಲಿಸಿಲ್ಲ. ಆರೋಪಿಗಳ ನಿರ್ದಿಷ್ಟ ಪಾತ್ರದ ಬಗ್ಗೆ ಸ್ಪಷ್ಟ ಉಲ್ಲೇಖವಿಲ್ಲ. ಪ್ರತ್ಯಕ್ಷದರ್ಶಿಗಳ ಹೇಳಿಕೆಯಲ್ಲೂ ವ್ಯತ್ಯಾಸ ಕಂಡು ಬಂದಿದೆ ಎಂದು ಅಭಿಪ್ರಾಯಪಟ್ಟು ಹೈಕೋರ್ಟ್‌ ಜಾಮೀನು ಮಂಜೂರು ಮಾಡಿತು. ಇದನ್ನೂ ಓದಿ: Haveri | ಅಪಘಾತ ಪ್ರಕರಣ – ಅಪ್ರಾಪ್ತ ಮಗನಿಗೆ ಬೈಕ್ ನೀಡಿದ ತಂದೆಗೆ 27,000 ರೂ. ದಂಡ