ಮುತ್ತಪ್ಪ ರೈ ಆಪ್ತ ಬಳಗದಲ್ಲಿ ಕೋಲ್ಡ್ ವಾರ್ – ನಟಿ ಅನುಷ್ಕಾ ಶೆಟ್ಟಿ ಸಹೋದರನ ಕೊಲೆಗೆ ಸ್ಕೆಚ್

ಬೆಂಗಳೂರು: ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ದಿವಂಗತ ಮುತ್ತಪ್ಪ ರೈ ಅಪ್ತ ಬಳಗದಲ್ಲಿ ಕೋಲ್ಡ್ ವಾರ್ ಆರಂಭವಾಗಿರುವ ಬಗ್ಗೆ ವದಂತಿ ಹರಡಿದ್ದು, ಖ್ಯಾತ ನಟಿ ಅನುಷ್ಕಾ ಶೆಟ್ಟಿ ಸಹೋದರ ಜಯಕರ್ನಾಟಕ ಸಂಘಟನೆಯ ಕಾರ್ಯಕರ್ತ ಗುಣರಂಜನ್ ಶೆಟ್ಟಿ ಕೊಲೆಗೆ ಸ್ಕೆಚ್ ನಡೆದಿರುವ ಬಗ್ಗೆ ಆರೋಪ ಕೇಳಿಬಂದಿದೆ.

ಮನ್ಮಿತ್ ರೈ, ಮುತ್ತಪ್ಪ ರೈ ಹತ್ತಿರದ ಸಂಬಂಧಿಯಾಗಿದ್ದು, ಗುಣರಂಜನ್ ಶೆಟ್ಟಿ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಸಹೋದರ. ಗುಣರಂಜನ್ ಶೆಟ್ಟಿ ಹಾಗೂ ಮನ್ಮಿತ್ ರೈ ಇಬ್ಬರು ಮುತ್ತಪ್ಪ ರೈ ಜೊತೆಗೆ ಇದ್ದರು. ನಂತರ ಮುತ್ತಪ್ಪ ರೈ ಜೊತೆಯಿಂದ ಮನ್ಮಿತ್ ರೈ ಹೊರಬಂದಿದ್ದರು. ಇದೀಗ ತನಗೆ ಕೊಲೆ ಬೆದರಿಕೆ ಇದೆ ಎಂದು ಗುಣರಂಜನ್ ಶೆಟ್ಟಿ ಆರೋಪಿಸಿದ್ದಾರೆ. ಈ ಬಗ್ಗೆ ಜಯ ಕರ್ನಾಟಕ ಸಂಘಟನೆ ಗೃಹ ಸಚಿವ ಆರಗ ಜ್ಞಾನೇಂದ್ರರಿಗೆ ದೂರು ನೀಡಿದೆ. ಇದನ್ನೂ ಓದಿ: ಬೂದಿಮುಚ್ಚಿದ ಕೆಂಡದಂತೆ ಭಾರತ – ಯುಪಿಯಲ್ಲಿ 250ಕ್ಕೂ ಗಲಭೆಕೋರರು ಅರೆಸ್ಟ್

ಗುಣರಂಜನ್ ಶೆಟ್ಟಿ ಹತ್ಯೆಗೆ ಸ್ಕೆಚ್ ವದಂತಿ ಹಿನ್ನೆಲೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಮನ್ಮಿತ್ ರೈ, ಗುಣರಂಜನ್ ಶೆಟ್ಟಿ ಹತ್ಯೆಗೆ ಸ್ಕೆಚ್ ಎಂಬ ವದಂತಿಗಳು ಕೇಳಿ ಬರುತ್ತಿವೆ. ಇದು ಎಷ್ಟು ಸತ್ಯ ಎಂಬುದನ್ನು ಪೊಲೀಸರು ತನಿಖೆ ಮಾಡ್ತಾರೆ. ಆದರೆ ಈ ವಿಚಾರದಲ್ಲಿ ನನ್ನ ಹೆಸರು ಯಾಕೆ ಬರ್ತಾ ಇದೆ ಗೊತ್ತಿಲ್ಲ. ನಾನು ವ್ಯವಹಾರದ ಕಾರಣ ವಿದೇಶಕ್ಕೆ ಬಂದಿದ್ದೇನೆ. ಇದಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ತನಿಖೆ ಆಗ್ತಾ ಇದ್ರೆ ಯಾರ ಹೆಸರು ಇದೆಯೋ ಅದು ಹೊರಗೆ ಬರುತ್ತೆ. ಆದರೆ ಅದಕ್ಕೂ ಮೊದಲೇ ನನ್ನ ಹೆಸರು ಯಾಕೆ ಬಳಸುತ್ತಿದ್ದಾರೆ ಗೊತ್ತಿಲ್ಲ. ನನ್ನ ಮೇಲೆ ಇದುವೆರಗೂ ಯಾವುದೇ ಕ್ರಿಮಿನಲ್ ಪ್ರಕರಣಗಳು ಇಲ್ಲ. ಯಾವ ಸ್ಟೇಷನ್‍ನಲ್ಲೂ ಎಫ್‍ಐಆರ್ ದಾಖಲಾಗಿಲ್ಲ. ಯಾವುದೇ ಅಪರಾಧ ಪ್ರಕರಣಗಳಲ್ಲಿ ಇಲ್ಲದೆ ಇರುವಾಗ ಯಾಕೆ ನನ್ನ ವಿರುದ್ಧ ಆರೋಪ ಬರುತ್ತಿದೆ ಗೊತ್ತಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಫೀರ್ ಪಾಶಾ ದರ್ಗಾ, ಮೂಲ ಅನುಭವ ಮಂಟಪ ವಿವಾದ – 770 ಮಠಾಧೀಶರಿಂದ ಇಂದು ಬೃಹತ್ ಸಮಾವೇಶ

ಮುತ್ತಪ್ಪ ರೈ ಮರಣ ಹೊಂದಿದ ಬಳಿಕ ಅಪ್ತ ಬಳಗದಲ್ಲಿ ಗಲಾಟೆ ಆರಂಭವಾಗಿರುವ ಬಗ್ಗೆ ಈ ಹಿಂದೆಯೂ ಹಲವು ಬಾರಿ ವದಂತಿಗಳು ಹರಡಿತ್ತು. ಇದೀಗ ಆಪ್ತ ಒಡನಾಡಿಗಳಾಗಿದ್ದ ಇಬ್ಬರ ನಡುವೆ ಜಟಾಪಟಿಯಾಗುತ್ತಿರುವ ಬಗ್ಗೆ ಮತ್ತೊಮ್ಮೆ ಆರೋಪ ಕೇಳಿಬರುತ್ತಿದೆ.

Comments

Leave a Reply

Your email address will not be published. Required fields are marked *