ಅನುಕ್ತ: ಕೊಲೆ ರಹಸ್ಯದ ಸುತ್ತ ಥ್ರಿಲ್ಲರ್ ಪಯಣ!

ಪಬ್ಲಿಕ್ ರೇಟಿಂಗ್: 3.5/5

ಬೆಂಗಳೂರು: ಕಾರ್ತಿಕ್ ಅತ್ತಾವರ್ ನಾಯಕನಾಗಿ ನಟಿಸಿರೋ ಅನುಕ್ತ ಚಿತ್ರ ತೆರೆ ಕಂಡಿದೆ. ಕರಾವಳಿ ಪ್ರದೇಶದ ಅವ್ಯಕ್ತ ವಿಚಾರಗಳನ್ನೊಳಗೊಂಡ ಕಥೆ, ಪತ್ತೇದಾರಿಕೆ, ಭೂತ ಕೋಲ ಮುಂತಾದ ವಿಚಾರಗಳಿಂದ ಅನುಕ್ತ ನಿರೀಕ್ಷೆಗೆ ಕಾರಣವಾಗಿತ್ತು. ಅದೆಲ್ಲವನ್ನು ತಣಿಸುವಂತೆ, ಕರಾವಳಿ ತೀರದೊಳಗಿನ ಥ್ರಿಲ್ಲಿಂಗ್ ಜರ್ನಿಯಂಥಾ ಅನುಭವವನ್ನು ಅನುಕ್ತ ನೀಡುವಂತಿದೆ.

ಕಾರ್ತಿಕ್ ಅತ್ತಾವರ್ ಪೊಲೀಸ್ ಅಧಿಕಾರಿಯಾಗಿ ನಟಿಸಿದರೆ, ಸಂಗೀತಾ ಭಟ್ ಅವರ ಮಡದಿಯ ಪಾತ್ರವನ್ನ ನಿರ್ವಹಿಸಿದ್ದಾರೆ. ಖಡಕ್ ಪೊಲೀಸ್ ಅಧಿಕಾರಿಯಾದ ನಾಯಕ ತನ್ನ ಮಡದಿಯ ಮನೋವ್ಯಾಕುಲ ನೀಗುವ ಸಲುವಾಗಿ ಒಂದು ಹಳೇ ಮನೆಯನ್ನ ಸೇರಿಕೊಳ್ಳುತ್ತಾನೆ. ಅದು ಆಸುಪಾಸಿನ ಜನರ ಪಾಲಿಗೆ ದೆವ್ವಗಳ ಓಡಾಟವಿರೋ ಮನೆ. ಅದರ ಸುತ್ತಾ ನಾನಾ ಹಾರರ್ ಕಥೆಗಳು ಊರು ತುಂಬಾ ಹಬ್ಬಿಕೊಂಡಿರುತ್ತದೆ. ಈ ಮನೆಯಿಂದಲೇ ಅಸಲಿ ಥ್ರಿಲ್ಲರ್ ಕಥೆ ಬಿಚ್ಚಿಕೊಳ್ಳುತ್ತೆ.

ಇಪ್ಪತೈದು ವರ್ಷಗಳ ಹಿಂದೆ ಆ ಮನೆಯಲ್ಲಿ ಓರ್ವ ಹೆಂಗಸಿನ ಕೊಲೆ ನಡೆದಿರುತ್ತೆ. ಇನ್ನೇನು ಮುಚ್ಚಿಯೇ ಹೋಗಲಿದ್ದ ಆ ಕೊಲೆಯ ರಹಸ್ಯ ಬೇಧಿಸಲು ನಾಯಕ ಮುಂದಾಗುತ್ತಾನೆ. ಹಾಗೆ ಆ ತನಿಖೆಯ ಗರ್ಭಕ್ಕಿಳಿಯುತ್ತಲೇ ಆ ವಿದ್ಯಮಾನಕ್ಕೂ ತನ್ನ ಬದುಕಿಗೂ ನಂಟಿದೆಯೆಂಬ ಸತ್ಯದ ಅನಾವರಣವಾಗುತ್ತೆ. ಹಾಗೆ ಕೊಲೆಯಾದ ಹೆಂಗಸು ಯಾರು? ಆಕೆಗೂ ನಾಯಕನ ಬದುಕಿಗೂ ಏನು ಸಂಬಂಧ? ಕೊಲೆ ಮಾಡಿದವರ್ಯಾರು ಎಂಬೆಲ್ಲ ಪ್ರಶ್ನೆಗಳಿಗೆ ತೀವ್ರವಾದ ಕುತೂಹಲ ಕಾಯ್ದಿಟ್ಟುಕೊಂಡೇ ಉತ್ತರಗಳು ಅನಾವರಣಗೊಳ್ಳುತ್ತಾ ಸಾಗುತ್ತವೆ.

ಅನುಕ್ತಕ್ಕೆ ಕಥೆ ಬರೆದು ನಾಯಕನಾಗಿಯೂ ನಟಿಸಿರುವವರು ಕಾರ್ತಿಕ್ ಅತ್ತಾವರ್. ಈಗಾಗಲೇ ನಾಯಕನಾಗಿ ಪ್ರಸಿದ್ಧರಾಗಿದ್ದಾರೆ. ಈ ಚಿತ್ರದ ಮೂಲಕ ಚಿತ್ರರಂಗದಲ್ಲಿಯೂ ನಾಯಕನಾಗಿ ನೆಲೆ ನಿಲ್ಲೋ ಸ್ಪಷ್ಟ ಸೂಚನೆಯನ್ನೇ ರವಾನಿಸಿದ್ದಾರೆ. ಡೈಲಾಗ್ ಡೆಲಿವರಿ, ಮಾತೇ ಇಲ್ಲದೆ ಬರೀ ಎಕ್ಸ್‍ಪ್ರೆಷನ್ನಿನಲ್ಲಿಯೇ ಒಂದು ಸನ್ನಿವೇಶಗಳನ್ನ ಪರಿಣಾಮಕಾರಿಯಾಗಿಸೋ ಗುಣಗಳಿಂದ ಕಾರ್ತಿಕ್ ಇಷ್ಟವಾಗುತ್ತಾರೆ. ನಾಯಕಿ ಸಂಗೀತಾ ಭಟ್ ಕೂಡಾ ಅಂಥಾದ್ದೇ ತನ್ಮಯತೆ ಹೊಂದಿರೋ ನಟನೆ ನೀಡಿದ್ದಾರೆ. ಇನ್ನು ಕೊಲೆಯಾದ ಹೆಂಗಸಿನ ಪಾತ್ರದಲ್ಲಿ ನಟಿಸಿರೋ ಅನು ಪ್ರಭಾಕರ್, ಮೇರಿ ಪಾತ್ರದ ಉಷಾ ಭಂಡಾರಿ, ಸಂಪತ್ ರಾಜ್ ಸೇರಿದಂತೆ ಎಲ್ಲರದ್ದೂ ನೆನಪಲ್ಲುಳಿಯುವಂಥಾ ನಟನೆ.

ಅಶ್ವತ್ಥ್ ಸ್ಯಾಮುಯಲ್ ನಿರ್ದೇಶಕನಾಗಿಯೂ ಭರವಸೆ ಮೂಡಿಸುತ್ತಾರೆ. ಎಚ್ಚರ ತಪ್ಪಿದರೆ ಸಿಕ್ಕು ಸಿಕ್ಕಾಗುವ ಅಪಾಯವನ್ನವರು ಜಾಣ್ಮೆಯಿಂದಲೇ ದಾಟಿಕೊಂಡು ಒಂದೊಳ್ಳೆ ಚಿತ್ರವನ್ನು ಕಟ್ಟಿ ಕೊಟ್ಟಿದ್ದಾರೆ. ಭೂತ ಕೋಲವೂ ಸೇರಿದಂತೆ ಎಲ್ಲವನ್ನೂ ಸಹಜವಾಗಿ, ಸನ್ನಿವೇಶಕ್ಕೆ ತಕ್ಕಷ್ಟೇ ಬಳಸಿಕೊಂಡು ಪ್ರೇಕ್ಷಕರಿಗೆ ಥ್ರಿಲ್ಲರ್ ಅನುಭವ ಕಟ್ಟಿಕೊಟ್ಟಿದ್ದಾರೆ. ಇನ್ನುಳಿದಂತೆ ನುಬಿನ್ ಪೌಲ್ ಸಂಗೀತ, ಮನೋಹರ್ ಜೋಷಿ ಛಾಯಾಗ್ರಹಣ ಕೂಡಾ ಈ ಸಿನಿಮಾದ ದೊಡ್ಡ ಶಕ್ತಿಯಂತೆ ಮೂಡಿ ಬಂದಿದೆ.

ಹರೀಶ್ ಬಂಗೇರ ನಿರ್ಮಾಣದ ಅನುಕ್ತ ಬೇರೆಯದ್ದೇ ಅನುಭವ ನೀಡುವ ಚಿತ್ರ. ಮೊದಲಾರ್ಧ ಕೊಂಚ ಮಂದಗತಿ ಅನ್ನಿಸಿದರೂ ದ್ವಿತೀಯಾರ್ಧ ಅದನ್ನು ಮರೆಸುತ್ತದೆ. ಮತ್ತೆಲ್ಲಿಗೋ ಕರೆದೊಯ್ಯುತ್ತದೆ. ವಿಭಿನ್ನ ಶೈಲಿಯ ಥ್ರಿಲ್ಲರ್ ಚಿತ್ರ ನೋಡಿದ ಖುಷಿಯನ್ನು ಅನುಕ್ತ ಮನಸಲ್ಲುಳಿಸುತ್ತೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Comments

Leave a Reply

Your email address will not be published. Required fields are marked *