ಬೇರ್ಪಟ್ಟಿದೆ ಲಕ್ಷ ಕೋಟಿ ಟನ್ ತೂಕದ ಹಿಮಬಂಡೆ: ಭಾರತದ ಮೇಲಾಗುವ ಪರಿಣಾಮ ಏನು?

ಲಂಡನ್: ಜಾಗತಿಕ ತಾಪಮಾನದಿಂದಾಗಿ ಭಾರೀ ದೊಡ್ಡ ಹಿಮಬಂಡೆಯೊಂದು ಅಂಟಾರ್ಟಿಕಾದಲ್ಲಿರುವ ವಿಶ್ವದ ಅತ್ಯಂತ ದೊಡ್ಡ ಹಿಮಬಂಡೆಯಾಗಿರುವ ಲಾರ್ಸೆನ್ ಸಿ ಯಿಂದ ಜುಲೈ 10- 12ರ ಮಧ್ಯಭಾಗದಲ್ಲಿ ಬೇರ್ಪಟ್ಟಿದೆ.

ಈ ಹಿಮಬಂಡೆ ಸರಿ ಸುಮಾರು 5 ಸಾವಿರ 800 ಚದರ ಕಿ.ಮೀ. ಅಷ್ಟು ದೊಡ್ಡದಾಗಿದ್ದು, ಒಂದು ಲಕ್ಷ ಕೋಟಿ ಟನ್ ತೂಕವಿದೆ. ಅಂದ್ರೆ ಬರೋಬ್ಬರಿ ನಾಲ್ಕು ದೆಹಲಿಯಷ್ಟು ದೊಡ್ಡದು. ಈ ಹಿಮಬಂಡೆ ತುಂಡಾಗಿರುವುದಿಂದ ವಿಶ್ವದಲ್ಲೇ ಭಾರೀ ಪ್ರತಿಕೂಲ ಪರಿಣಾಮವಾಗಲಿದೆ ಅಂತ ವಿಜ್ಞಾನಿಗಳು ಅಂದಾಜಿಸಿದ್ದಾರೆ. ವಿಶೇಷವಾಗಿ ದಕ್ಷಿಣ ಧ್ರುವದ ಬಳಿ ಸಂಚರಿಸುವ ಹಡಗುಗಳಿಗೆ ಗಂಭೀರ ಅಪಾಯವಾಗಲಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ಭಾರತದ ಮೇಲಾಗುವ ಪರಿಣಾಮ ಏನು?
ಭಾರತ ಪರ್ಯಾಯ ದ್ವೀಪರಾಷ್ಟ್ರ. ಮೂರು ಕಡೆ ನೀರಿನಿಂದ ತುಂಬಿದೆ. ಹೀಗಾಗಿ, ತುಂಡಾಗಿರುವ ಮಂಜುಗಡ್ಡೆ ನಿಧಾನವಾಗಿ ಕರಗಲು ಆರಂಭಿಸುತ್ತದೆ. ಆಗ ಸಮುದ್ರ ಮಟ್ಟ ಏರಿಕೆಯಾಗೋದು ಸಾಮಾನ್ಯ. ಹಾಗಾಗಿ, ಭಾರತದ ಕಡಲ ಕಿನಾರೆಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಲಿದೆ. ಅರಬ್ಬಿಸಮುದ್ರದ ಮುಂಬೈ, ಹಿಂದೂ ಮಹಾಸಾಗರದ ಚೆನ್ನೈ, ಬಂಗಾಳಕೊಲ್ಲಿಯ ಕೊಲ್ಕತ್ತಾದ ಮೇಲೆ ಪರಿಣಾಮ ಆಗಲಿದೆ.

2050ರೊಳಗೆ ಸಮುದ್ರ ಏರಿಕೆಯಾಗಲಿರುವ ಬಗ್ಗೆ ವಿಜ್ಞಾನಿಗಳು ಅಂದಾಜಿಸಿದ್ದು 2100ನೇ ಇಸ್ವಿಯೊಳಗಾಗಿ 30 ರಿಂದ 100 ಸೆ.ಮೀ. ನೀರು ಏರಿಕೆಯಾಗಬಹುದು. ಕೆಲವು ಪ್ರದೇಶದಲ್ಲಿ 200 ರಿಂದ 300 ಸೆ.ಮೀ. ಸಾಗರ ಮಟ್ಟ ಏರಿಕೆಯಾಗಬಹುದು.

ಈಗಾಗಲೇ ಸುಂದರ್‍ಬನ್ಸ್ ಹಾಗೂ ಮಜೌಲಿಯಲ್ಲಿ ಸಮುದ್ರ ಮಟ್ಟ ಏರಿಕೆಯಾಗುತ್ತಿದ್ದು, ಭಾರತ, ಚೀನಾ, ಬಾಂಗ್ಲಾದೇಶ ಸೇರಿದಂತೆ ಹಲವು ದೇಶಗಳಿಗೆ ಸಮಸ್ಯೆಯಾಗಬಹುದು. ಪ್ರಮುಖವಾಗಿ ದಕ್ಷಿಣ ಏಷ್ಯಾ ಹಾಗೂ ಆಗ್ನೇಯಾ ಏಷ್ಯಾ ದೇಶಗಳಿಗೆ ತೊಂದರೆಯಾಗಲಿದೆ.

ನೀರಿನ ಮಟ್ಟ ಏರಿಕೆಯಾದಲ್ಲಿ ವಾತಾವರಣದಲ್ಲಿ ಹವಾಮಾನ ವೈಪರಿತ್ಯವಾಗಿ ಮಳೆ ಮೇಲೆ ಪರಿಣಾಮ ಆಗಬಹುದು. ಇದರಿಂದಾಗಿ ಹಲವು ದೇಶಗಳಲ್ಲ ಪ್ರವಾಹ ಹೆಚ್ಚಾಗುವ ಸಾಧ್ಯತೆಯಿದೆ.

ಪಬ್ಲಿಕ್ ಟಿವಿ ಬಿಗ್ ಬುಲೆಟಿನ್ ನಲ್ಲಿ ಪರಿಸರವಾದಿ ಅಕ್ಷಯ್ ಹೆಬ್ಳಿಕರ್ ಮಾತನಾಡಿ, ಸದ್ಯಕ್ಕೆ ಏನೂ ಪರಿಣಾಮ ಆಗುವುದಿಲ್ಲ. 15-20 ವರ್ಷದಲ್ಲಿ ಭಾರತದ ಮೇಲೆ ಖಂಡಿತವಾಗಿಯೂ ಪರಿಣಾಮ ಬೀರುತ್ತದೆ. ವಿಶೇಷವಾಗಿ ಸಮುದ್ರದಲ್ಲಿ ಜೀವ ವೈವಿಧ್ಯಗಳ ಮೇಲೆ ಭಾರೀ ಪರಿಣಾಮ ಬೀರುತ್ತದೆ. ಸಿಹಿ ನೀರು ಉಪ್ಪು ನೀರಿಗಳು ಸೇರುವುದರಿಂದ ಜಲಚರಗಳ ಮೇಲೆ ಪರಿಣಾಮ ಬೀರಲಿದೆ ಎಂದು ತಿಳಿಸಿದರು.

 

Comments

Leave a Reply

Your email address will not be published. Required fields are marked *