ಬೆಳಗಾವಿ| ಜಿಲ್ಲಾಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಬಾಣಂತಿ ಸಾವು

ಬೆಳಗಾವಿ: ಜಿಲ್ಲಾಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಬಾಣಂತಿಯೊಬ್ಬರು (Maternal Death) ಸಾವನ್ನಪ್ಪಿದ್ದಾರೆ.

ಹುಕ್ಕೇರಿ ತಾಲೂಕಿನ ಗೌಡವಾಡ ಗ್ರಾಮದ ವೈಶಾಲಿ ಕೊಡಬಾಗಿ ಅವರು ಹೆರಿಗೆಗಾಗಿ ಬೆಳಗಾವಿ ಬಿಮ್ಸ್‌ ಆಸ್ಪತ್ರೆಗೆ ದಾಖಲಾಗಿದ್ದರು. ಸಿಸೇರಿಯನ್ ಮೂಲಕ‌ ಹೆಣ್ಣು ಮಗುವಿಗೆ ಜನ್ಮ ನೀಡಿದ ವೈಶಾಲಿಗೆ ಬೆಳಗ್ಗೆ ಎದೆನೋವು ಕಾಣಿಸಿಕೊಂಡಿತ್ತು. ಇದನ್ನೂ ಓದಿ: ಬಳ್ಳಾರಿ ಬಳಿಕ ಬೆಳಗಾವಿಯಲ್ಲೂ ಬಾಣಂತಿಯರು, ಶಿಶುಗಳ ಸಾವು!

ತಕ್ಷಣ ಬಾಣಂತಿ ವೈಶಾಲಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಿತ್ತಾದರೂ, ಚಿಕಿತ್ಸೆ ಫಲಿಸದೇ ಮರಣ ಹೊಂದಿದ್ದಾರೆ ಎಂದು ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ. ಆದರೆ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡಿಲ್ಲ ಎಂದು ವೈಶಾಲಿ ಪತಿ ಈರಣ್ಣ ಆರೋಪಿಸಿದ್ದಾರೆ.

ಈ ಘಟನೆಯಿಂದ ಆಸ್ಪತ್ರೆಯಲ್ಲಿ ಬಿಗುವಿನ ವಾತಾವರಣ ಉಂಟಾಗಿದ್ದು, ಸ್ಥಳಕ್ಕೆ ಎಪಿಎಂಸಿ ಪೊಲೀಸರು ಆಗಮಿಸಿದ್ದಾರೆ.

ಕಳೆದ ಆರು ತಿಂಗಳಲ್ಲಿ ಜಿಲ್ಲೆಯಲ್ಲಿ 29 ಬಾಣಂತಿಯರು ಸಾವಿಗೀಡಾಗಿದ್ದಾರೆಂದು ವರದಿಯಾಗಿತ್ತು. ಈಗ ಮತ್ತೊಂದು ಸಾವಾಗಿದೆ. ಬಾಣಂತಿಯರ ಸಾವಿಗೆ ಬಹುಅಂಗಾಂಗ ವೈಫಲ್ಯ, ಕಿಡ್ನಿ ಸಮಸ್ಯೆ ಕಾರಣ ಎಂದು ಈಚೆಗೆ ನಡೆದ ಚಳಿಗಾಲದ ಅಧಿವೇಶನದಲ್ಲಿ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದರು. ಇದನ್ನೂ ಓದಿ: ಸರ್ಕಾರದ ಬೇಜವಾಬ್ದಾರಿತನದಿಂದ ಬಾಣಂತಿಯರು, ಹಸುಗೂಸುಗಳ ಸಾವು : ವಿಜಯೇಂದ್ರ