ತಮಿಳುನಾಡು ಸಿಎಂ ಆಗಿ ಅಣ್ಣಾಮಲೈ ಪ್ರಮಾಣವಚನ ಸ್ವೀಕರಿಸ್ತಾರೆ: ವಿನಯ್‌ ಗುರೂಜಿ

ಚಿಕ್ಕಮಗಳೂರು: ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಣ್ಣಾಮಲೈ (Anna Malai) ಪ್ರಮಾಣವಚನ ಸ್ವೀಕಾರ ಮಾಡುತ್ತಾರೆ ಎಂದು ಅವಧೂತ ವಿನಯ್‌ ಗುರೂಜಿ ಭವಿಷ್ಯ ನುಡಿದಿದ್ದಾರೆ.

ಚಿಕ್ಕಮಗಳೂರು (Chikkamagaluru) ಕಾರಗೃಹದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಣ್ಣಾಮಲೈ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡುವುದನ್ನು ನಾನು ನೋಡ್ತೀನಿ, ನೀವು ನೋಡ್ತೀರಾ. ಅಣ್ಣಾಮಲೈ ಎಸ್‌ಪಿ ಆಗಿದ್ದಾಗ ಬಂದಾಗಲೇ 2 ಸೇಬು ಕೊಟ್ಟು ಹೇಳಿದ್ದೆ. ಖಾಕಿಯಿಂದ ಖಾದಿ ಉಡ್ತಾರೆ ಎಂದು ಹೇಳಿದ್ದೆ. ಅದು ನಿಜವಾಗುತ್ತದೆ ಎಂದು ವಿನಯ್‌ ಗುರೂಜಿ ಹೇಳಿದ್ದಾರೆ.

ಮೊನ್ನೆಯಷ್ಟೆ ಅಯೋಧ್ಯೆಯಲ್ಲಿ ರಾಮನ ಪಟ್ಟಾಭಿಷೇಕ (Ayodhya Ram Mandir) ಮುಗಿದಿದೆ. ಸದ್ಯದಲ್ಲೇ ಮೋದಿಯ (Narendra Modi) ಪಟ್ಟಾಭಿಷೇಕವನ್ನೂ ಎಲ್ಲರೂ ನೋಡ್ತೀವಿ ಎಂದು ವಿನಯ್‌ ಗುರೂಜಿ ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ: ಸಂಸತ್ತಿನಲ್ಲಿ ಸದ್ದು ಮಾಡಿದ ಡಿಕೆ ಸುರೇಶ್ ‌ʼಪ್ರತ್ಯೇಕ ರಾಷ್ಟ್ರʼ ಹೇಳಿಕೆ- ಕಾಂಗ್ರೆಸ್‌ ಕ್ಷಮೆ ಕೇಳುವಂತೆ ಆಗ್ರಹ

ಇದೆ ವೇಳೆ ಮಾತನಾಡಿದ ಅವರು, ಸಂಸದ ಡಿ.ಕೆ. ಸುರೇಶ್ ಹೇಳಿಕೆಗೆ ಅಸಮಾಧಾನ ಹೊರಹಾಕಿದ್ದಾರೆ. ಮಹಮದ್ ಜಿನ್ನಾ ಈ ತಪ್ಪು ಮಾಡಿದ್ದರು. ಗಾಂಧೀಜಿ ಅದನ್ನ ಬರೆದಿಡುತ್ತಾರೆ. ನೆಹರೂ-ಜಿನ್ನಾ ಇಬ್ಬರನ್ನೂ ಕೂರಿಸಿಕೊಂಡು ಮಹಾತ್ಮ ಗಾಂಧಿ, ನಾನಿರುವವರೆಗೂ ನನ್ನನ್ನ ಭಾಗ ಮಾಡಬೇಡಿ ಎಂದು ಕೇಳಿಕೊಂಡಿದ್ದರು. ಆದರೆ ಆವತ್ತು ಗಾಂಧಿ ಮಾತನ್ನ ಯಾರೂ ಕೇಳಲಿಲ್ಲ. ಇಂದಿನ ಹಿಂದೂ-ಮುಸ್ಲಿಂ ಗಲಾಟೆ, ಹಳ್ಳಿ-ಹಳ್ಳಿಯಲ್ಲೂ ಪ್ರತಿಬಿಂಬಿಸುತ್ತೆ ಅಂತ ಹೇಳಿದ್ರು.

ಇವತ್ತು ದೇಶದಲ್ಲಿ ಆಗ್ತಿರೋದು ಅದೇ ಎಂದು ಆತಂಕ ಹೊರಹಾಕಿದ್ದಾರೆ. ನಮ್ಮ ಅಧಿಕಾರದ ಆಸೆಗೆ ಜಾತಿ-ಧರ್ಮವನ್ನ ಬದಿಗಿಡಬೇಕು. ನಿಮ್ಮ ರಾಜಕೀಯವನ್ನ ಕೆಲಸ-ಟ್ಯಾಲೆಂಟ್ ನಲ್ಲಿ ತೋರಿಸಿ ಎಂದು ರಾಜಕಾರಣಿಗಳಿಗೆ ಕಿವಿಮಾತು ಹೇಳಿದ್ದಾರೆ. ಅವರಿಬ್ಬರನ್ನ ಬೈದುಕೊಂಡೇ ವಿಧಾನಸಭೆ ಕಲಾಪ ಮುಗಿಸ್ತೀರಾ. ಜನರ ಸಮಯ, ದುಡ್ಡು, ಟ್ಯಾಕ್ಸ್ ನಿಂದ ರಾಜಕಾರಣಿ, ಅಧಿಕಾರಿಗಳ ಸಂಬಳ ನಡೆಯುತ್ತಿದೆ. ಎಲ್ಲರೂ ಆ ಪರಿಜ್ಞಾನ ಇಟ್ಟುಕೊಳ್ಳಬೇಕು, ಆಗ ಇಂತಹಾ ಭಾಷಣ ಮಾಡಲ್ಲ ಎಂದು ಪರೋಕ್ಷವಾಗಿ ಡಿ.ಕೆ.ಸುರೇಶ್ ವಿರುದ್ಧ ಕಿಡಿಕಾರಿದ್ದಾರೆ.ನಾನು-ನೀನು ಅನ್ನೋ ಭೇದ ಹಿಂಸೆ, ನಾನು-ನೀನು ಒಂದು ಅನ್ನೋದು ಅಹಿಂಸೆ ಎಂದಿದ್ದಾರೆ.