ಅನ್ನಭಾಗ್ಯಕ್ಕೆ ಮತ್ತಷ್ಟು ಸಂಕಷ್ಟ- ರಾಜ್ಯಗಳು ಹೇಳಿದ್ದೇನು?

ಬೆಂಗಳೂರು: ಒಂದು ಕಡೆಯಲ್ಲಿ ಅನ್ನಭಾಗ್ಯದ (Anna Bhagya) ಅಕ್ಕಿಗೆ (Rice) ಕೇಂದ್ರದ ಬಾಗಿಲು ಬಹುತೇಕ ಬಂದ್ ಆಗಿದ್ದರೆ ಇನ್ನೊಂದು ಕಡೆ ರಾಜ್ಯಗಳಿಂದಲೂ ನಿರೀಕ್ಷಿಸಿದ ಭರವಸೆ ಸಿಕ್ಕಿಲ್ಲ.

ಛತ್ತೀಸ್‍ಗಢ (Chhattisgarh) ಅಕ್ಕಿ ಕೊಡುವ ಭರವಸೆ ನೀಡಿದರೂ ಎಷ್ಟು ಪ್ರಮಾಣ ಎಂದು ಖಚಿತ ಪಡಿಸಿಲ್ಲ. ಅಲ್ಲದೇ ಛತ್ತೀಸ್‌ಗಢದಿಂದ ಅಕ್ಕಿ ಕೊಳ್ಳುವುದು ದುಬಾರಿಯಾಗಿದೆ. ಒಂದು ವೇಳೇ ಖರೀದಿಸಿದರೂ ಸಾಗಾಣಿಕಾ ವೆಚ್ಚವೂ ಹೆಚ್ಚಾಗುತ್ತದೆ.

ಪಂಜಾಬ್ (Punjab) 1.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ನೀಡುವ ಭರವಸೆ ನೀಡಿದೆ. ಆಂಧ್ರಪ್ರದೇಶ (Andhra Pradesh) ಅಕ್ಕಿ ನೀಡುವ ಭರವಸೆ ನೀಡಿದರೂ ಕೆಜಿಗೆ 42 ರೂ. ದರ ನಿಗದಿ ಎಂದಿದೆ. ತೆಲಂಗಾಣ ಮತ್ತು ತಮಿಳುನಾಡಿನ ಅಕ್ಕಿ ನಿರೀಕ್ಷೆಯಲ್ಲಿ ಇದ್ದ ರಾಜ್ಯ ಸರ್ಕಾರಕ್ಕೆ ಖಚಿತ ಭರವಸೆ ಸಿಕ್ಕಿಲ್ಲ ಎನ್ನಲಾಗಿದೆ.

ಒಟ್ಟಾರೆ ಅನ್ನ ಭಾಗ್ಯದ ಅಕ್ಕಿಗಾಗಿ ರಾಜ್ಯಗಳ ಮೊರೆ ಹೋದ ರಾಜ್ಯ ಸರ್ಕಾರಕ್ಕೆ ಬೇಡಿಕೆಯಷ್ಟು ಅಕ್ಕಿಯ ಭರವಸೆ ಇನ್ನೂ ಸಿಕ್ಕಿಲ್ಲ. ಇದನ್ನೂ ಓದಿ: ಅನ್ನಭಾಗ್ಯ ಅಕ್ಕಿಗೆ ಕೇಂದ್ರದ ಬಾಗಿಲು ಬಂದ್ – ಸರ್ಕಾರದ ಮುಂದಿರುವ ಆಯ್ಕೆಗಳೇನು?

 

ಶುಕ್ರವಾರ ಕೇಂದ್ರ ಆಹಾರ ಸಚಿವ ಪಿಯೂಶ್‌ ಗೋಯಲ್‌ (Piyush Goyal) ಅವರನ್ನು ರಾಜ್ಯದ ಆಹಾರ ಸಚಿವ ಮುನಿಯಪ್ಪ (Muniyappa) ಭೇಟಿ ಮಾಡಿದ್ದರು. ಭೇಟಿ ಬಳಿಕ ಪ್ರತಿಕ್ರಿಯಿಸಿದ ಮುನಿಯಪ್ಪ, ಪಿಯೂಷ್ ಗೋಯಲ್ ಅಕ್ಕಿ ನೀಡಲು ಸಾಧ್ಯವಿಲ್ಲ ಎಂದು ಹೇಳಿದರು. ಇದು ರಾಜಕೀಯ ದುರುದ್ದೇಶದ ನಿಲುವು. ಸ್ಟಾಕ್ ಇದ್ದರೂ ಕೊಡುವುದಿಲ್ಲ ಎನ್ನುವುದು ಎಷ್ಟು ಸರಿ? ನಾವು ಅಕ್ಕಿಯನ್ನು ಕೊಡುತ್ತೇವೆ. ಕೇಂದ್ರದ ಏಜೆನ್ಸಿಗಳ ಮೂಲಕ ಅಕ್ಕಿ ಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಈ ವಾರದಲ್ಲಿ ತೀರ್ಮಾನ ಆಗಲಿದೆ ಎಂದು ತಿಳಿಸಿದರು.