ಮಗನ ತಪ್ಪಿನಿಂದಾಗಿ ಬಾಡಿಗೆ ಮನೆಯಿಂದ ನಮ್ಮನ್ನು ಹೊರಹಾಕಿದ್ರು: ಅಂಜಲಿ ಕೊಲೆ ಆರೋಪಿ ತಾಯಿ ಕಣ್ಣೀರು

– ವಿಶ್ವ ತಪ್ಪು ಮಾಡಿದ್ದಾನೆ, ಅವರಿಗೆ ಶಿಕ್ಷೆ ಆಗಬೇಕು
– ಅವನನ್ನು ನೋಡಲು ಆಸ್ಪತ್ರೆಗೂ ನಾನು ಹೋಗಲ್ಲ

ಹುಬ್ಬಳ್ಳಿ: ವಿಶ್ವ ತಪ್ಪು ಮಾಡಿದ್ದಾನೆ. ಅವನಿಗೆ ಶಿಕ್ಷೆ ಆಗಲೇಬೇಕು. ಅವನಿಂದ ನಮ್ಮ ಮಾನ-ಮರ್ಯಾದೆ ಎಲ್ಲಾ ಹೋಗಿದೆ ಎಂದು ಅಂಜಲಿ ಹತ್ಯೆ (Anjali Murder Case) ಪ್ರಕರಣದ ಆರೋಪಿ ವಿಶ್ವನ ತಾಯಿ ಶ್ವೇತ ಕಣ್ಣೀರು ಹಾಕಿದರು.

ಹುಬ್ಬಳ್ಳಿಯಲ್ಲಿ (Hubballi) ವೀರಾಪುರ ಓಣಿಯ ಅಂಜಲಿ ಅಂಬಿಗೇರ ಎಂಬಾಕೆ ಹತ್ಯೆ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ಆರೋಪಿ ವಿಶ್ವ ಅಲಿಯಾಸ್ ಗಿರೀಶ್‌ಗೆ ಗಲ್ಲು ಶಿಕ್ಷೆಯಾಗಬೇಕು ಎಂದು ಜನರು ಒತ್ತಾಯಿಸಿದ್ದಾರೆ. ಪುತ್ರನ ಕೃತ್ಯಕ್ಕೆ ಆರೋಪಿ ತಾಯಿ ಬೇಸರಗೊಂಡು ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ: ಕೊಲೆ ಆರೋಪಿ ಗೋವಾ, ಮಹಾರಾಷ್ಟ್ರದಲ್ಲಿ ತಲೆಮರೆಸಿಕೊಳ್ಳಲು ಪ್ಲ್ಯಾನ್‌ ಮಾಡಿದ್ದ: ರೇಣುಕಾ ಸುಕುಮಾರ

ಪ್ರಕರಣ ಕುರಿತು ಮಾತನಾಡಿದ ಆರೋಪಿ ತಾಯಿ ಶ್ವೇತಾ, ನನ್ನ ಮಗ ಮೊದಲು ಕೆಲಸ ಮಾಡುತ್ತಿದ್ದ. ಈ ನಡುವೆ ಕೆಲಸ ಬಿಟ್ಟ. ಆ ನಂತರ ಮನೆಯಲ್ಲಿದ್ದು, ಮದ್ಯವ್ಯಸನ ಚಟಕ್ಕೆ ಬಲಿಯಾದ. ಆ ನಂತರ 6 ತಿಂಗಳು ಮನೆ ಬಿಟ್ಟು ಹೋಗಿದ್ದ ಎಂದು ಮಗನ ನಡವಳಿಕೆ ಬಗ್ಗೆ ಮಾತನಾಡಿದರು.

ಅವನು ಆರಾಮಾಗಿ ಇದ್ದಾನೆಂದು ತಿಳಿದುಕೊಂಡಿದ್ದೆವು. ಅದರೆ ಇದೀಗ ಕೊಲೆ ಮಾಡಿರುವುದು ಗೊತ್ತಾಗಿದೆ. ಅವನು ತಪ್ಪು ಮಾಡಿದ್ದಾನೆ. ಅವನಿಗೆ ಕಾನೂನು ಪ್ರಕಾರ ಶಿಕ್ಷೆ ಆಗಲಿ. ಅದರೆ ಮಗ ಮಾಡಿದ ತಪ್ಪಿಗೆ ನಮಗೆ ಶಿಕ್ಷೆ ನೀಡಲಾಗುತ್ತಿದೆ ಎಂದು ಬೇಸರಿಸಿದರು. ಇದನ್ನೂ ಓದಿ: ವಿಶ್ವನಿಗೂ ನಮ್ಮ ಅಕ್ಕನಿಗೂ ಯಾವುದೇ ಸಂಬಂಧ ಇಲ್ಲ: ಅಂಜಲಿ ಸಹೋದರಿ ಸ್ಪಷ್ಟನೆ

ಅವನಿಂದಾಗಿ ಬಾಡಿಗೆ ಮನೆಯಿಂದ ಹೊರಗೆ ಹಾಕಿದ್ದಾರೆ. ನಾನು ಹೋಟೆಲಿನ ಅಡುಗೆ ಮನೆಯಲ್ಲಿ ವಾಸ ಮಾಡುತ್ತಿದ್ದೇನೆ. ಅವನಿಂದ ನಮ್ಮ ಮಾನ-ಮರ್ಯಾದೆ ಎಲ್ಲಾ ಹೋಗಿದೆ. ಅವನನ್ನು ನೋಡಲು ಕಿಮ್ಸ್ ಆಸ್ಪತ್ರೆಗೂ ನಾನು ಹೋಗುವುದಿಲ್ಲ ಎಂದು ನೊಂದು ನುಡಿದರು.