ರಾಮನಗರ: ಜಿಲ್ಲೆಯ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಜೆಡಿಎಸ್- ಕಾಂಗ್ರೇಸ್ ಪಕ್ಷಗಳ ಮೈತ್ರಿ ಅಭ್ಯರ್ಥಿ ಅನಿತಾ ಕುಮಾರಸ್ವಾಮಿಯವರು ಇಂದಿನಿಂದ ಆರಂಭವಾಗಬೇಕಿದ್ದ ಪ್ರಚಾರ ಕಾರ್ಯಕ್ರಮವನ್ನ ಬುಧವಾರಕ್ಕೆ ಮುಂದೂಡಿದ್ದಾರೆ.
ಇಂದಿನಿಂದ ಅನಿತಾ ಕುಮಾರಸ್ವಾಮಿಯವರು ಅಧಿಕೃತ ಪ್ರಚಾರ ಕಾರ್ಯ ನಡೆಯಬೇಕಿತ್ತು. ಆದರೆ ಪ್ರಚಾರ ಕಾರ್ಯಕ್ಕೆ ತಾತ್ಕಾಲಿಕ ಬ್ರೇಕ್ ನೀಡಿದ್ದು, ಮತ್ತೆ ಹೋಬಳಿವಾರು ಕಾರ್ಯಕರ್ತರ ಮುಖಂಡರ ಸಭೆ ಕರೆದಿದ್ದಾರೆ. ಇಂದು ಮಧ್ಯಾಹ್ನ 2 ಗಂಟೆಗೆ ಕೈಲಾಂಚ ಹಾಗೂ ಕಸಬಾ ಹೋಬಳಿಗಳ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ಸಭೆಯನ್ನ ರಾಮನಗರದ ಹಿಲ್ ವ್ಯೂ ರೆಸಾರ್ಟ್ ನಲ್ಲಿ ಆಯೋಜಿಸಲಾಗಿದೆ.

ಸಂಜೆ 4 ಗಂಟೆಗೆ ಹಾರೋಹಳ್ಳಿ – ಮರಳವಾಡಿ ಹೋಬಳಿಗಳ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ಸಭೆಯನ್ನು ಹಾರೋಹಳ್ಳಿಯ ಕಾಯಿಮಂಡಿ ಕೃಷ್ಣಪ್ಪನವರ ಮಂಡಿ ಮಾರುಕಟ್ಟೆ ಆವರಣದಲ್ಲಿ ಸಭೆ ಕರೆಯಲಾಗಿದೆ. ಅನಿತಾ ಕುಮಾರಸ್ವಾಮಿ ನೇತೃತ್ವದಲ್ಲಿ ಪ್ರಚಾರದ ರೂಪುರೇಷೆ ತಯಾರು ಮಾಡಲು ಹಾಗೂ ಜೆಡಿಎಸ್- ಕಾಂಗ್ರೆಸ್ ಕಾರ್ಯಕರ್ತರ ನಡುವಿನ ಅಸಮಾಧಾನವನ್ನ ತೊಡೆದು ಹಾಕಲು ಅನಿತಾ ಕುಮಾರಸ್ವಾಮಿ ಮುಂದಾಗಿದ್ದಾರೆ.

ಎರಡೂ ಪಕ್ಷದ ಕಾರ್ಯಕರ್ತರು, ಮುಖಂಡರ ಜೊತೆಗೆ ಚರ್ಚೆ ನಡೆಸಲಿದ್ದು, ಕಾಂಗ್ರೆಸ್ ಪಕ್ಷದ ಸ್ಥಳೀಯ ಮುಖಂಡರು ಹಾಗೂ ಸಂಸದ ಡಿ.ಕೆ.ಸುರೇಶ್, ಎಂಎಲ್ ಸಿ ರವಿ ಭಾಗಿಯಾಗುವ ಸಾಧ್ಯತೆಗಳಿವೆ. ಆದ್ರೆ ಇದೀಗ ಅನಿತಾ ಅವರು ಪ್ರಚಾರ ಮುಂದೂಡಿದ್ದು ಯಾಕೆ ಎಂಬುದಾಗಿ ತಿಳಿದುಬಂದಿಲ್ಲ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply