ತವರಲ್ಲೇ ಜೆಡಿಎಸ್ ಗೆ ಶಾಕ್ ಕೊಟ್ಟ ಸಿಎಂ – ‘ಕೈ’ ಹಿಡಿಯಲಿರೋ ಅನಿಲ್ ಚಿಕ್ಕಮಾದು

ಮೈಸೂರು: ತವರು ಜಿಲ್ಲೆ ಮೈಸೂರು ಭಾಗದಲ್ಲಿ ಜೆಡಿಎಸ್ ಬಲ ತಗ್ಗಿಸುವ ಆಪರೇಷನನ್ನು ಸಿಎಂ ಸಿದ್ದರಾಮಯ್ಯ ಮುಂದುವರಿಸಿದ್ದಾರೆ. ಜೆಡಿಎಸ್ ಶಾಸಕರಾಗಿದ್ದ ದಿವಂಗತ ಚಿಕ್ಕಮಾದು ಅವರ ಕುಟುಂಬವನ್ನು ಕಾಂಗ್ರೆಸ್‍ಗೆ ಸೆಳೆಯುವಲ್ಲಿ ಸಿಎಂ ಯಶಸ್ವಿಯಾಗಿದ್ದಾರೆ.

ದಿವಂಗತ ಶಾಸಕ ಚಿಕ್ಕಮಾದು ಅವರ ಪುತ್ರ ಜಿಲ್ಲಾ ಪಂಚಾಯತ್ ಸದಸ್ಯ ಅನಿಲ್ ಚಿಕ್ಕಮಾದು, ಇವತ್ತು ತಮ್ಮ ಜಿಲ್ಲಾ ಪಂಚಾಯತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರುವುದನ್ನು ಅಧಿಕೃತಗೊಳಿಸಿದ್ದಾರೆ. ಎಚ್.ಡಿ ಕೋಟೆ ಪರಿಶಿಷ್ಟ ವರ್ಗದ ಮೀಸಲು ಕ್ಷೇತ್ರದ ಶಾಸಕರಾಗಿದ್ದ ಚಿಕ್ಕಮಾದು ಅಕಾಲಿಕ ಮರಣಕ್ಕೆ ಇಡಾಗಿದ್ದರು. ಇವರ ಮಗ ಅನಿಲ್ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಆಗುವ ಇಚ್ಛೆ ಹೊಂದಿದ್ದರು. ಆದರೆ ಅಲ್ಲಿನ ಮಾಜಿ ಶಾಸಕ ಚಿಕ್ಕಣ್ಣ ಇತ್ತೀಚೆಗೆ ಜೆಡಿಎಸ್ ಸೇರ್ಪಡೆಯಾದ ಕಾರಣ ಟಿಕೆಟ್ ಕೈ ತಪ್ಪುವ ಸ್ಥಿತಿ ಇತ್ತು. ಇದನ್ನು ಅರಿತ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ಟಿಕೆಟ್ ಭರವಸೆ ನೀಡಿ ಚಿಕ್ಕಮಾದು ಕುಟುಂಬವನ್ನು ಕಾಂಗ್ರೆಸ್‍ಗೆ ಸೆಳೆದಿದ್ದಾರೆ.

ಚಿಕ್ಕಮಾದು ಮೈಸೂರು ಭಾಗದ ನಾಯಕ ಸಮುದಾಯದ ಪ್ರಬಲ ನಾಯಕ. ಮೈಸೂರು ಜಿಲ್ಲೆಯ ಐದಾರು ಕ್ಷೇತ್ರಗಳಲ್ಲಿ ನಾಯಕ ಸಮುದಾಯ ನಿರ್ಣಾಯಕ ಸ್ಥಾನದಲ್ಲಿದ್ದಾರೆ. ಹೀಗಾಗಿ ಚಿಕ್ಕಮಾದು ಕುಟುಂಬ ಕಾಂಗ್ರೆಸ್ ಸೇರ್ಪಡೆ ಜೆಡಿಎಸ್‍ಗೆ ದೊಡ್ಡ ಹಿನ್ನಡೆಯಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರೋ ಮಾಜಿ ಸಚಿವ ಎಚ್.ವಿಶ್ವನಾಥ್, ಅನಿಲ್‍ಗೆ ಟಿಕೆಟ್ ಭರವಸೆ ಸಿಕ್ಕಿತ್ತು. ಆದರೆ ಯಾರೋ ಆ ಚಿಕ್ಕ ಹುಡುಗನ ತಲೆಕೆಡಿಸಿ ಸಿದ್ದರಾಮಯ್ಯ ಪಾದಕ್ಕೆ ಬೀಳಿಸಿದ್ದಾರೆ. ಇದು ನೋವಿನ ವಿಚಾರ ಎಂದು ಹೇಳಿದ್ರು.

Comments

Leave a Reply

Your email address will not be published. Required fields are marked *