ಔಟಾದ ಕೋಪದಲ್ಲಿ ಬೇಲ್ಸ್ ಹಾರಿಸಿ ದಂಡ ತೆತ್ತ ರೋಹಿತ್

ಮುಂಬೈ: ಕ್ರೀಡಾಂಗಣದಲ್ಲಿ ಸಾಮಾನ್ಯವಾಗಿ ಕೂಲ್ ಆಗಿ ಕಾಣುವ ರೋಹಿತ್ ಶರ್ಮಾ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಔಟಾಗುತ್ತಿದಂತೆ ತಮ್ಮ ಕೋಪವನ್ನು ಪ್ರದರ್ಶಿಸಿ ದಂಡ ತೆತ್ತಿದ್ದಾರೆ.

ಪಂದ್ಯದ 4ನೇ ಓವರಿನಲ್ಲಿ ಘಟನೆ ನಡೆದಿದ್ದು, 12 ರನ್ ಗಳಿಸಿದ್ದ ರೋಹಿತ್ ಶರ್ಮಾರನ್ನು ಕೆಕೆಆರ್ ಬೌಲರ್ ಹ್ಯಾರಿ ಗರ್ನಿ ಎಲ್‍ಬಿ ಬಲೆಗೆ ಕೆಡವಿದ್ದರು. ಆದರೆ ಈ ವೇಳೆ ಅಂಪೈರ್ ತೀರ್ಮಾನದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ರೋಹಿತ್ ಡಿಆರ್ ಎಸ್ ಮನವಿ ಸಲ್ಲಿಸಿದ್ದರು. ಅಂಪೈರ್ ಪರವೇ ಡಿಆರ್ ಎಸ್ ತೀರ್ಪು ಬಂದ ಹಿನ್ನೆಲೆಯಲ್ಲಿ ರೋಹಿತ್ ಪೆವಿಲಿಯನ್ ನತ್ತ ನಡೆದರು. ಇದಕ್ಕೂ ಮುನ್ನ ಬೌಲರ್ ಬದಿ ಇದ್ದ ವಿಕೆಟ್‍ಗಳಿಗೆ ತಮ್ಮ ಬ್ಯಾಟ್ ತಾಗಿಸಿ ಬೇಲ್ಸ್ ಹಾರಿಸಿ ಅಸಮಾಧಾನ ವ್ಯಕ್ತಪಡಿಸಿದ್ದರು.

ರೋಹಿತ್ ಶರ್ಮಾರ ಈ ನಡೆಯನ್ನು ಗಂಭೀರವಾಗಿ ಪರಿಗಣಿಸಿದ ಮ್ಯಾಚ್ ರೆಫ್ರಿ ಪಂದ್ಯದ ಸಂಭಾವನೆಯ ಶೇ.15 ರಷ್ಟರ ಮೊತ್ತವನ್ನು ದಂಡವಾಗಿ ವಿಧಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ಈ ವಿಡಿಯೋ ವೈರಲ್ ಆಗಿದ್ದು, ರೋಹಿತ್ ನಡೆಯ ಬಗ್ಗೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಭರ್ಜರಿ ಪ್ರದರ್ಶನ 91 ರನ್(34 ಎಸೆತ, 6 ಬೌಂಡರಿ, 9 ಸಿಕ್ಸರ್) ಸಿಡಿಸಿ ಮಿಂಚಿದ್ದರು. ಆದರೆ ಪಂದ್ಯದಲ್ಲಿ ಮುಂಬೈ 34 ರನ್ ಗಳ ಅಂತರದಲ್ಲಿ ಸೋಲುಂಡಿತು. ಕೆಕೆಆರ್ ಪರ ರಸೆಲ್ 80 ರನ್(40 ಎಸೆತ, 6 ಬೌಂಡರಿ, 8 ಸಿಕ್ಸರ್) ಸಿಡಿಸಿದ ಪರಿಣಾಮ ತಂಡ 200 ರನ್ ಗಳ ಗಡಿ ದಾಟಿತು.

Comments

Leave a Reply

Your email address will not be published. Required fields are marked *