ಚಿಕನ್ ಅಂಗಡಿಗಳ ತ್ಯಾಜ್ಯ ತಿನ್ನಲು ಬಂದ ನಾಯಿಗೆ ಸ್ಕೂಟಿ ಡಿಕ್ಕಿ- ಸವಾರ ಸಾವು

ಬೆಂಗಳೂರು: ರಸ್ತೆ ಬದಿಗೆ ಹಾಕಿದ್ದ ಚಿಕನ್ ಅಂಗಡಿಗಳ ತ್ಯಾಜ್ಯ ತಿನ್ನಲು ಬಂದಿದ್ದ ನಾಯಿಗೆ ಸ್ಕೂಟಿ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಂಗಳೂರು ಹೊರವಲಯ ಆನೇಕಲ್ ಸಮೀಪದ ಗುಡ್ನಹಳ್ಳಿ ಕೆರೆಯ ಬಳಿ ನಡೆದಿದೆ.

ಹೊಸೂರು ರಸ್ತೆಯ ಕುಮಾರನಹಳ್ಳಿ ನಿವಾಸಿ ಮುನಿಯಲ್ಲಪ್ಪ ಮೃತ ಸವಾರ. ಮುನಿಯಲ್ಲಪ್ಪ ಶನಿವಾರ ರಾತ್ರಿ ಆನೇಕಲ್ ಪಟ್ಟಣದಿಂದ ಕುಮಾರನಹಳ್ಳಿ ಸ್ಕೂಟಿಯಲ್ಲಿ ಹೋಗುತ್ತಿದ್ದರು. ಈ ವೇಳೆ ಗುಡ್ನಹಳ್ಳಿ ಕೆರೆಯ ಮೇಲೆ ನಾಯಿಗಳು ಅಡ್ಡಲಾಗಿ ಬಂದ ಪರಿಣಾಮ ದ್ವಿಚಕ್ರ ವಾಹನದಿಂದ ಕೆಳಗೆ ಬಿದ್ದಿದ್ದಾರೆ. ತಲೆ ಹಾಗೂ ಎದೆಯ ಭಾಗಕ್ಕೆ ಪೆಟ್ಟು ಬಿದ್ದು, ತೀವ್ರ ರಕ್ತಸ್ರಾವದಿಂದ ಮುನಿಯಲ್ಲಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಈ ಕುರಿತು ಸ್ಥಳೀಯರು ಮಾಹಿತಿ ನೀಡುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಆನೇಕಲ್ ಪೋಲಿಸರು ಪರಿಶೀಲನೆ ನಡೆಸಿದರು. ಬಳಿಕ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಿದ್ದಾರೆ.

ಗುಡ್ನಹಳ್ಳಿ ಕೆರೆ ಏರಿ ಮೇಲೆ ಪಟ್ಟಣದ ಚಿಕನ್ ಅಂಗಡಿಗಳ ತ್ಯಾಜ್ಯವನ್ನು ತಂದು ಹಾಕಲಾಗುತ್ತಿದೆ. ಇದರಿಂದಾಗಿ ವಾಸನೆ ಹಿಡಿದು ಬರುವ ನಾಯಿಗಳು ರಸ್ತೆಯಲ್ಲಿ ಓಡಾಡುವುದರಿಂದ ಅಪಘಾತಗಳು ಸಂಭವಿಸುತ್ತಿವೆ. ಚಿಕನ್ ಅಂಗಡಿಗಳ ತ್ಯಾಜ್ಯವನ್ನು ಎಸೆದು ಹೋಗುತ್ತಿರುವುದರಿಂದ ಸಾಕಷ್ಟು ಅಪಘಾತ ಪ್ರಕರಣಗಳು ನಡೆಯುತ್ತಿವೆ ಎಂದು ಸ್ಥಳೀಯರು ದೂರಿದ್ದಾರೆ.

Comments

Leave a Reply

Your email address will not be published. Required fields are marked *