ಮನೆಗೆ ಬಂದ ಪಾರ್ಸೆಲ್‌ನಲ್ಲಿತ್ತು ವ್ಯಕ್ತಿಯ ಮೃತದೇಹ – ಬಾಕ್ಸ್‌ ಓಪನ್‌ ಮಾಡಿ ಮಹಿಳೆ ಶಾಕ್‌!

ಅಮರಾವತಿ: ಮನೆಗೆ ಬಂದ ಪಾರ್ಸೆಲ್‌ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಮೃತದೇಹ ಕಂಡು ಮಹಿಳೆ ಶಾಕ್‌ ಆಗಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

ಜಿಲ್ಲೆಯ ಉಂಡಿ ಮಂಡಲದ ಯಂಡಗಂಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪಾರ್ಸೆಲ್‌ನಲ್ಲಿ ಮೃತದೇಹದ ಜೊತೆಗೆ ಒಂದು ಪತ್ರ ಕೂಡ ಇತ್ತು. ನಾಗ ತುಳಸಿ ಎಂದು ಗುರುತಿಸಲಾದ ಮಹಿಳೆ ತನ್ನ ಮನೆ ನಿರ್ಮಿಸಲು ಹಣಕಾಸಿನ ನೆರವು ಕೋರಿ ಕ್ಷತ್ರಿಯ ಸೇವಾ ಸಮಿತಿಗೆ ತೆರಳಿದ್ದರು. ಆಕೆಯ ಅರ್ಜಿಯ ಆಧಾರದ ಮೇಲೆ ಸಮಿತಿಯು ಆಕೆಗೆ ಟೈಲ್ಸ್ ಕಳುಹಿಸಿತ್ತು.

ಆಕೆ ಮತ್ತೆ ಸಮಿತಿಗೆ ಮನವಿ ಸಲ್ಲಿಸಿದ್ದರು. ನಿರ್ಮಾಣಕ್ಕೆ ಹೆಚ್ಚಿನ ಸಹಾಯವನ್ನು ಕೇಳಿದ್ದರು. ಸಂಸ್ಥೆಯು ಆಕೆಗೆ ವಿದ್ಯುತ್ ಉಪಕರಣಗಳನ್ನು ಒದಗಿಸುವ ಭರವಸೆ ನೀಡಿತ್ತು. ಮಹಿಳೆಗೆ ವಾಟ್ಸಾಪ್ ಸಂದೇಶದಲ್ಲಿ, ಲೈಟ್‌ಗಳು, ಫ್ಯಾನ್‌ಗಳು ಮತ್ತು ಸ್ವಿಚ್‌ಗಳಂತಹ ವಸ್ತುಗಳನ್ನು ಕಳುಹಿಸಲಾಗುವುದು ಎಂದು ಸಮಿತಿ ತಿಳಿಸಿತ್ತು.

ಗುರುವಾರ ರಾತ್ರಿ ಮಹಿಳೆ ಮನೆಗೆ ಪಾರ್ಸೆಲ್‌ವೊಂದು ತಲುಪಿತು. ಅದರಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳು ಇದ್ದವು ಎಂದು ಡೆಲಿವರಿ ಮಾಡುವಾತ ತಿಳಿಸಿದ್ದ. ಮಹಿಳೆ ನಂತರ ಪಾರ್ಸೆಲ್ ತೆರೆದು ನೋಡುತ್ತಿದ್ದಂತೆ ಆಘಾತಕ್ಕೆ ಒಳಗಾಗಿದ್ದಾರೆ. ಪಾರ್ಸೆಲ್‌ನಲ್ಲಿ ವಿದ್ಯುತ್‌ ಉಪಕರಣಗಳಿಗೆ ಬದಲಾಗಿ, ವ್ಯಕ್ತಿಯೊಬ್ಬರ ದೇಹ ಇತ್ತು.

ಕೂಡಲೇ ಆಕೆಯ ಕುಟುಂಬಸ್ಥರು ಮೃತದೇಹದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸ್ ತಂಡವೊಂದು ಸ್ಥಳಕ್ಕೆ ಧಾವಿಸಿ‌ ಪರಿಶೀಲನೆ ನಡೆಸಿತು. ಅಧಿಕಾರಿಗಳು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.

ಮೃತದೇಹದ ಜೊತೆಗೆ ಪಾರ್ಸೆಲ್‌ನಲ್ಲಿ ಪತ್ರವೊಂದು ಸಿಕ್ಕಿದ್ದು, ಅದರಲ್ಲಿ 1.30 ಕೋಟಿ ಕೊಡಬೇಕು ಎಂದು ಮಹಿಳೆಗೆ ಬೇಡಿಕೆ ಇಡಲಾಗಿದೆ. ಬೇಡಿಕೆ ಈಡೇರಿಸಲು ವಿಫಲವಾದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕುಟುಂಬಕ್ಕೆ ಎಚ್ಚರಿಕೆ ನೀಡಲಾಗಿದೆ.