ಹೆಣ್ಣು ಮಗು ಹುಟ್ಟಿದ್ದಕ್ಕೆ ಪತ್ನಿಗೆ ಕರೆಂಟ್ ಶಾಕ್ ನೀಡಿ ಕೊಲೆಗೆ ಯತ್ನಿಸಿದ ಟೆಕ್ಕಿ

ಹೈದರಾಬಾದ್: ಹೆಣ್ಣು ಮಗುವಿಗೆ ಜನ್ಮ ನೀಡಿದ ಕಾರಣಕ್ಕೆ ಟೆಕ್ಕಿಯೊಬ್ಬ ತನ್ನ ಪತ್ನಿಗೆ ಕರೆಂಟ್ ಶಾಕ್ ನೀಡಿ ಕೊಲೆ ಮಾಡಲು ಯತ್ನಿಸಿದ ಘಟನೆ ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯಲ್ಲಿ ನಡೆದಿದೆ.

ರಾಜರತ್ನಂ ಎಂಬ ಟೆಕ್ಕಿಯೇ ತನ್ನ ಪತ್ನಿಯನ್ನು ಕೊಲೆ ಮಾಡಲು ಯತ್ನಿಸಿದ ವ್ಯಕ್ತಿ. ಪ್ರಸ್ತುತ ಈ ಕುರಿತು ರಾಜರತ್ನಂ ಪತ್ನಿ ಪ್ರಶಾಂತಿ ಪತಿ ವಿರುದ್ಧ ಶನಿವಾರ ಕೃಷ್ಣ ಜಿಲ್ಲೆಯ ಪೆನಮಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕಳೆದ ಎರಡು ವರ್ಷಗಳ ಹಿಂದೆ ದಂಪತಿ ಮದುವೆಯಾಗಿದ್ದರು. ಈ ದಂಪತಿಗೆ ಈಗಾಗಲೇ ಒಂದು ಗಂಡು ಮಗು ಇದ್ದು, ಜನವರಿ 28 ರಂದು ಪ್ರಶಾಂತಿ ಅವರು ಎರಡನೇ ಹೆರಿಗೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.

ಹೆಣ್ಣು ಮಗು ಜನಿಸಿದ ನಂತರ ರಾಜರತ್ನಂ ಪತ್ನಿಗೆ ಹೆಚ್ಚಿನ ವರದಕ್ಷಿಣೆ ತರುವಂತೆ ಕಿರುಕುಳ ನೀಡಲು ಆರಂಭಿಸಿದ್ದ. ಮೂಲಗಳ ಪ್ರಕಾರ ಟೆಕ್ಕಿ ಕಚೇರಿಗೆ ತೆರಳದೆ ಮನೆಯಲ್ಲೇ ಕಾರ್ಯನಿರ್ವಹಿಸುತ್ತಿದ್ದ ಎನ್ನಲಾಗಿದೆ.

ಪತ್ನಿ ಮಲಗಿರುವ ವೇಳೆ ಆಕೆಯ ಕೈಗೆ ವೈರ್ ಸುತ್ತಿದ್ದ ರಾಜರತ್ನಂ ಕರೆಂಟ್ ಶಾಕ್ ನೀಡಲು ಪ್ರಯತ್ನಿಸಿದ್ದ. ಆದರೆ ಪ್ರಶಾಂತಿ ಎಚ್ಚರಗೊಂಡಿದ್ದರಿಂದ ಘಟನೆಯಿಂದ ಪರಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಈ ವೇಳೆ ಪ್ರಶಾಂತಿ ಅವರ ಮೇಲೆ ರಾಜರತ್ನಂ ಹಲ್ಲೆ ನಡೆಸಿದ್ದು, ಅವರ ಮುಖ, ಕತ್ತು ಮತ್ತು ಕೈಗಳ ಮೇಲೆ ಗಾಯವಾಗಿದೆ. ಪತಿ ಹಲವು ದಿನಗಳಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ಹಿಂಸೆ ನೀಡಿದ್ದಾನೆ ಎಂದು ಪ್ರಶಾಂತಿ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *