18 ವರ್ಷ ತುಂಬುತ್ತಿದ್ದಂತೆ ತಂದೆಯಿಂದಲೇ ಮಗಳ ಕೊಲೆ!

ಅಮರಾವತಿ: ಮಗಳು ಅನ್ಯ ಯುವಕನೊಂದಿಗೆ ಸಂಬಂಧ ಹೊಂದಿದ್ದಾಳೆಂಬ ಸಂಶಯದಿಂದ ತಂದೆಯೇ ಮಗಳನ್ನು ಬರ್ಬರವಾಗಿ ಕೊಲೆಗೈದ ಘಟನೆ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ನಡೆದಿದೆ.

ಚಂದ್ರಲಪಡು ಎಂಬ ಹಳ್ಳಿಯ ನಿವಾಸಿಯಾದ ಚಂದ್ರಿಕಾ ಎಂಬವಳೇ ಕೊಲೆಯಾದ ದುರ್ದೈವಿ. ಚಂದ್ರಿಕಾ ಫಾರ್ಮಸಿ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು, ಕಳೆದ ಶನಿವಾರವಷ್ಟೇ ಅವಳಗೆ 18 ವರ್ಷ ತುಂಬಿತ್ತು. ಆ ಖುಷಿಗೆ ಆವಳು ಸ್ನೇಹಿತರೊಂದಿಗೆ ಸೇರಿ ಕೇಕ್ ಕತ್ತರಿಸಿ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಮನೆಗೆ ಮರಳಿದ್ದಳು.

ಮನೆಗೆ ಮರಳಿದ ಚಂದ್ರಿಕಾ, ಮೊಬೈಲ್ ನಲ್ಲಿ ತನ್ನ ಸ್ನೇಹಿತನೊಂದಿಗೆ ಮಾತನಾಡುತ್ತಿದ್ದಳು. ಇದನ್ನು ನೋಡಿದ ಆಕೆಯ ತಂದೆ ಕೊಟ್ಟಯ್ಯ ತನ್ನ ಮಗಳು ಅನ್ಯ ಯುವಕನೊಂದಿಗೆ ಸಂಬಂಧ ಹೊಂದಿದ್ದಾಳೆಂದು ಅನುಮಾನಗೊಂಡು ಕೊಡಲಿಯ ಕಟ್ಟಿಗೆ ಹಿಡಿಯಿಂದ ಚಂದ್ರಿಕಾಳ ತಲೆಗೆ ಬಲವಾಗಿ ಹೊಡೆದಿದ್ದಾನೆ. ತಕ್ಷಣ ಚಂದ್ರಿಕಾ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ.

ಈಗಾಗಲೇ ಆರೋಪಿ ಕೊಟ್ಟಯ್ಯನನ್ನು ಬಂಧಿಸಿರುವ ಪೊಲೀಸರು ಈ ಕುರಿತಂತೆ ವಿಚಾರಣೆ ನಡೆಸಿದ್ದಾರೆ. ಚಂದ್ರಿಕಾಗೆ ಮೊದಲೇ ಯುವಕನೊಂದಿಗೆ ಸಂಬಂಧವಿತ್ತು. ಈಗ 18 ವರ್ಷ ತುಂಬಿದ್ದ ಹಿನ್ನೆಲೆಯಲ್ಲಿ ಆಕೆ ಪೋಷಕರ ಅನುಮತಿಗಾಗಿ ಕಾಯುತ್ತಿದ್ದಳು. ಮಗಳು ಯುವಕನ ಜೊತೆ ಸಂಬಂಧ ಹೊಂದಿದ್ದಾಳೆ ಎಂದು ತಿಳಿದು ಕೊಟ್ಟಯ್ಯ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಕೊಟ್ಟಯ್ಯ ತನ್ನ ಮಗಳಿಂದ ಮನೆತನ ಮರ್ಯಾದೆ ಹಾಳಾಗುತ್ತದೆ ಎನ್ನುವ ಚಿಂತೆಯಲ್ಲಿದ್ದ. ಈ ಕಾರಣಕ್ಕಾಗಿ ಮಗಳಿಗೆ ಪಾಠ ಕಲಿಸಲು ಈ ಕೃತ್ಯ ಎಸಗಿದ್ದಾನೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *