ಎನ್‍ಡಿಎ ಮಿತ್ರಕೂಟದಲ್ಲಿ ಒಡಕು – ಮೋದಿಗೆ ಟಿಡಿಪಿ ನಾಯಕರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ

ನವದೆಹಲಿ: ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಗೂ ಮೊದಲೇ ಎನ್‍ಡಿಎ ಕೂಟದಲ್ಲಿ ಬಿರುಕು ಕಾಣಿಸಿಕೊಂಡಿದೆ. ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನದ ವಿಚಾರವಾಗಿ ಮೋದಿ ವಿರುದ್ಧ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಮುನಿಸಿಕೊಂಡಿದ್ದಾರೆ.

ಚಂದ್ರಬಾಬು ಸಂಪುಟುದಲ್ಲಿದ್ದ ಬಿಜೆಪಿ ಸಚಿವರಾದ ಕೆ.ಶ್ರೀನಿವಾಸ್ ಮತ್ತು ಮಾಣಿಕ್ಯಲಾ ರಾವ್ ಅವರು ಸ್ಪೀಕರ್‍ಗೆ ರಾಜೀನಾಮೆ ಸಲ್ಲಿಸಿದ್ದರು. ಇದರ ಬೆನ್ನಲ್ಲೇ ಸಂಜೆ ಹೊತ್ತಿಗೆ ಟಿಡಿಪಿ ಮುಖಂಡರಾದ ಕೇಂದ್ರ ವಿಮಾನಯಾನ ಸಚಿವ ಅಶೋಕ್ ಗಜಪತಿರಾಜು, ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ ವೈ.ಎಸ್.ಚೌಧರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ರಾಜೀನಾಮೆ ಇನ್ನೂ ಅಂಗೀಕಾರವಾಗಿಲ್ಲ. ಸಂಪುಟದಿಂದ ಹೊರ ಬಂದರೂ ಮೈತ್ರಿಕೂಟದಿಂದ ಹೊರ ಬಂದಿಲ್ಲ ಅಂತ ಗಜಪತಿ ಬಾಬು ಹೇಳಿದ್ದರು. ಇದಕ್ಕೂ ಮುನ್ನ ಚಂದ್ರಬಾಬು ನಾಯ್ಡು ಜೊತೆ ಪ್ರಧಾನಿ ಮೋದಿ 20 ನಿಮಿಷ ದೂರವಾಣಿ ಮೂಲಕ ಸಂಧಾನ ಮಾತುಕತೆ ನಡೆಸಿದ್ದಾರೆ.

ಟಿಡಿಪಿ ಬೆನ್ನಲ್ಲೇ ಬಿಹಾರದ ನಿತೀಶ್ ಕುಮಾರ್ ಸಹ ನಮಗೂ ವಿಶೇಷ ಸ್ಥಾನಮಾನ ಬೇಕು ಅಂತ ಕೇಳಿದ್ದಾರೆ. ಎನ್‍ಡಿಎ ಕೂಟದ ವಿರುದ್ಧ ಮಿತ್ರಪಕ್ಷಗಳ ಮುನಿಸು ಇದೇ ಮೊದಲೇನಲ್ಲ. ಜೆಡಿಯು, ಶಿವಸೇನೆ, ಅಕಾಲಿದಳ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದು ಯಾವುದೇ ಕ್ಷಣದಲ್ಲೂ ಹೊರಬರುವ ಸಾಧ್ಯತೆ ಇದೆ ಎನ್ನಲಾಗಿದೆ.

ಟಿಡಿಪಿ ಅರೋಪಕ್ಕೆ ಪ್ರತಿಕ್ರಿಯಿಸಿರೋ ಕೇಂದ್ರ ಸಚಿವ ಸದಾನಂದಗೌಡ, ಟಿಡಿಪಿಗೆ ನಾವು ಎಂದೂ ಮಿತ್ರದ್ರೋಹ ಮಾಡಿಲ್ಲ ಏಳನೇ ಹಣಕಾಸು ಆಯೋಗದಲ್ಲಿ ಆಂಧ್ರಪ್ರದೇಶಕ್ಕೆ ಬೇರೆ ಎಲ್ಲ ರಾಜ್ಯಗಳಿಗಿಂತ ಹೆಚ್ಚು ಅನುದಾನ ಕೊಡಲಾಗಿದೆ. ಆದರೂ ಚಂದ್ರಬಾಬು ನಾಯ್ಡು ಏಕೆ? ಈ ನಿರ್ಧಾರಕ್ಕೆ ಬಂದಿದ್ದಾರೆ ಗೊತ್ತಿಲ್ಲ ಎಂದರು.

ಇನ್ನೂ ಆಂಧ್ರಪ್ರದೇಶ ವಿಧಾನಸಭೆಯಲ್ಲಿ ಬಿಜೆಪಿ ಸಚಿವರ ರಾಜೀನಾಮೆ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ ಚಂದ್ರಬಾಬು ನಾಯ್ಡು ಅವರು, ನಮ್ಮ ಕ್ಯಾಬಿನೆಟ್ ನಲ್ಲಿ ಇಬ್ಬರು ಸಚಿವರು ಉತ್ತಮವಾಗಿ ಕಾರ್ಯನಿರ್ವಹಿಸಿದ್ದರು. ತಮಗೇ ವಹಿಸಿದ್ದ ಇಲಾಖೆಗಳಲ್ಲಿ ಹಲವು ಅಭಿವೃದ್ಧಿ ಕಾರ್ಯಮಾಡಿದ್ದಾರೆ. ಅವರ ಸೇವೆಗೆ ಧನ್ಯವಾದಗಳನ್ನು ತಿಳಿಸಿಸುತ್ತೇನೆ ಎಂದು ಹೇಳಿದರು.

ಈ ವೇಳೆ ಕೇಂದ್ರದ ನೀತಿಯ ವಿರುದ್ಧ ಕಿಡಿಕಾರಿದ ಅವರು, ಕೇಂದ್ರ ಸರ್ಕಾರ ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ನೀಡುತ್ತಿರುವ ಬೆಂಬಲವನ್ನು ಆಂಧ್ರಪ್ರದೇಶ ಅಭಿವೃದ್ಧಿ ವಿಚಾರದಲ್ಲಿ ನೀಡುತ್ತಿಲ್ಲ. ಕೇಂದ್ರ ಸರ್ಕಾರ ಏಕೆ ಈ ನೀತಿಯನ್ನು ಅನುಸರಿಸುತ್ತಿದೆ ಎಂದು ಪ್ರಶ್ನಿಸಿದರು.

ಮುನಿಸು ಯಾಕೆ?
ರಾಜ್ಯದ ಬಿಜೆಪಿ ನಾಯಕರು ಟಿಡಿಪಿಯನ್ನು ಸರ್ಕಾರದ ವಿರುದ್ಧ ಬಹಿರಂಗ ಹೇಳಿಕೆ ನೀಡುತ್ತಿದ್ದ ಹಿನ್ನೆಲೆಯಲ್ಲಿ ಚಂದ್ರ ಬಾಬು ನಾಯ್ಡು ಮೊದಲೇ ಮುನಿಸಿಕೊಂಡಿದ್ದರು. ಆದರೆ ಕೇಂದ್ರದ ಹಣಕಾಸು ಬಜೆಟ್ ನಲ್ಲಿ ವಿಶೇಷ ಅನುದಾನ ನೀಡದ ಹಿನ್ನೆಲೆಯಲ್ಲಿ ಈ ಅಸಮಾಧಾನಗೊಂಡಿದ್ದರು.

ಚಂದ್ರಬಾಬು ನಾಯ್ಡ, ಬಿಜೆಪಿಯವರು ಪದೇ ಪದೇ ಟೀಕೆ ಮಾಡುತ್ತಿದ್ದರೂ ನಾನು ನಮ್ಮ ಮುಖಂಡರಿಗೆ ತಿರುಗೇಟು ನೀಡದಂತೆ ತಡೆಯುತ್ತಿದ್ದೇನೆ. ಟಿಡಿಪಿ ಈಗಲೂ ಮಿತ್ರ ಧರ್ಮವನ್ನು ಪಾಲಿಸುತ್ತಿದ್ದರೂ ಸ್ಥಳೀಯ ಬಿಜೆಪಿ ನಾಯಕರು ನಮ್ಮ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಹೀಗಾಗಿ ಕೇಂದ್ರದ ಬಿಜೆಪಿ ನಾಯಕರು ಸ್ಥಳೀಯ ನಾಯಕರ ಆರೋಪಗಳ ಬಗ್ಗೆ ಗಮನ ನೀಡುತ್ತಾರೆ ಎನ್ನುವ ಭರವಸೆಯನ್ನು ನಾನು ಹೊಂದಿದ್ದೇನೆ. ಒಂದು ವೇಳೆ ಬಿಜೆಪಿ ಮೈತ್ರಿ ಮುಂದುವರಿಸಲು ಬಯಸದಿದ್ದರೆ ಟಿಡಿಪಿ ತನ್ನದೇ ದಾರಿಯಲ್ಲಿ ಸಾಗಲಿದೆ ಎಂದು ಈ ಹಿಂದೆ ಪ್ರತಿಕ್ರಿಯಿಸಿದ್ದರು.

ಎನ್‍ಡಿಎ ಮೈತ್ರಿಕೂಟದಲ್ಲಿ ಮಿತ್ರ ಪಕ್ಷಗಳಿಗೆ ಬೆಲೆ ಇಲ್ಲ. ಬಿಜೆಪಿಗೆ ಮಾತ್ರ ಬೆಲೆಯಿದೆ. ನೆಪ ಮಾತ್ರಕ್ಕೂ ಇದುವರೆಗೆ ಮೈತ್ರಿಕೂಟದ ಅಂಗಪಕ್ಷಗಳ ಸಭೆ ನಡೆಸಿಲ್ಲ. ಪ್ರಮುಖ ನಿರ್ಧಾರದ ವೇಳೆ ಅಂಗಪಕ್ಷಗಳನ್ನು ಸಂಪರ್ಕಿಸದೇ ಬಿಜೆಪಿ ಮುಖಂಡರೇ ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಿದ್ದಾರೆ ಎನ್ನುವ ಆರೋಪವನ್ನು ಟಿಡಿಪಿ ಮಾಡಿದೆ.

Comments

Leave a Reply

Your email address will not be published. Required fields are marked *