ಹೆಂಡತಿ, ಇಬ್ಬರು ಪುತ್ರಿಯರನ್ನ ಕೊಂದು ತಾನೂ ವಿಷ ಕುಡಿದ

ಹೈದರಾಬಾದ್: ವ್ಯಕ್ತಿಯೊಬ್ಬ ತನ್ನ ಹೆಂಡತಿ ಹಾಗೂ ಇಬ್ಬರು ಪುತ್ರಿಯರನ್ನ ಕೊಂದು ತಾನೂ ಆತ್ಮಹತ್ಯೆಗೆ ಶರಣಾಗಿರೋ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

ಇಲ್ಲಿನ ಕೃಷ್ಣಪುರಂನ ನಿವಾಸಿಯಾದ ರೈತ ರಾಮ ಸುಬ್ಬಾರೆಡ್ಡಿ ತನ್ನ ಹೆಂಡತಿ ಸುಲೋಚನಾ, ಪುತ್ರಿಯರಾದ ಪ್ರತಿಭಾ ಹಾಗೂ ಪ್ರತ್ಯುಶಾಳುನ್ನ ಕೊಂದು ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಮದ್ಯವ್ಯಸನಿಯಾಗಿದ್ದ ರೆಡ್ಡಿ ಮಂಗಳವಾರದಂದು ತನ್ನ ಹೆಂಡತಿ ಹಾಗೂ ಇಬ್ಬರು ಮಕ್ಕಳು ಮಲಗಿದ್ದ ವೇಳೆ ಅವರನ್ನು ಕಬ್ಬಿಣದ ರಾಡ್‍ನಿಂದ ಹೊಡೆದು ಕೊಲೆ ಮಾಡಿದ್ದಾನೆ. ಕುಟುಂಬಸ್ಥರನ್ನು ಕೊಲೆ ಮಾಡಿ ರೆಡ್ಡಿ ಅಲ್ಲಿಂದ ಪರಾರಿಯಾಗಿದ್ದ. ಬುಧವಾರ ಬೆಳಿಗ್ಗೆ ರೆಡ್ಡಿ ಪ್ರಜ್ಞಾಹೀನ ಸ್ಥಿತಿಯಲ್ಲಿ ತಡಿಪತ್ರಿ ಬಳಿ ಪತ್ತೆಯಾಗಿದ್ದಾನೆ. ಹೆಂಡತಿ ಮಕ್ಕಳನ್ನು ಕೊಂದ ನಂತರ ರೆಡ್ಡಿ ವಿಷ ಸೇವಿಸಿರಬಹುದು ಎಂದು ಪೊಲೀಸರು ಹೇಳಿದ್ದಾರೆ. ರೆಡ್ಡಿಯನ್ನು ಕೂಡಲೇ ಅನಂತಪುರ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಕೆಲವು ಗಂಟೆಗಳ ಬಳಿಕ ಸಾವನ್ನಪ್ಪಿದ್ದಾನೆ.

ಘಟನೆ ನಡೆದಾಗ ರೆಡ್ಡಿಯ ಮತ್ತೊಬ್ಬ ಪುತ್ರಿಯಾದ ಪ್ರಸನ್ನ ಮನೆಯಲ್ಲಿ ಇರಲಿಲ್ಲವಾದ್ದರಿಂದ ಆಕೆ ಮಾತ್ರ ಈಗ ಬದುಕುಳಿದಿದ್ದಾರೆ. ರೆಡ್ಡಿ ಹೆಚ್ಚಾಗಿ ಜೂಜಾಟ ಆಡುತ್ತಿದ್ದರಿಂದ ಸಾಕಷ್ಟು ಹಣ ಕಳೆದುಕೊಂಡಿದ್ದನೆಂದು ಪೊಲೀಸರು ಹೇಳಿದ್ದಾರೆ.

ಕೊಲೆಗೆ ಕಾರಣವೇನು?: ರೆಡ್ಡಿ ಆರ್ಥಿಕ ಸಂಕಷ್ಟಕ್ಕೆ ಈಡಾಗಿದ್ದು, ಇಬ್ಬರು ಪುತ್ರಿಯರನ್ನು ಉನ್ನತ ವಿದ್ಯಾಭ್ಯಾಸಕ್ಕೆ ಕಳಿಸಲು ಸಿದ್ಧವಿಲ್ಲದ ಕಾರಣ ಕೊಲೆ ಮಾಡಿದ್ದಾನೆಂದು ಪೊಲೀಸರು ಹೇಳಿದ್ದಾರೆ. ರೆಡ್ಡಿಯ ಕೊಲೆಯಾದ ಇಬ್ಬರು ಪುತ್ರಿಯರು ಎಂಬಿಎ ಸೀಟ್ ಪಡೆದಿದ್ದು, ಶೀಘ್ರದಲ್ಲೇ ತಿರುಪತಿಯಲ್ಲಿ ಕಾಲೇಜಿಗೆ ಸೇರಿಕೊಳ್ಳಬೇಕಿತ್ತು. ಸ್ವಲ್ಪ ಆಸ್ತಿಯನ್ನು ಮಾರಿ ಮಕ್ಕಳನ್ನು ಎಂಬಿಎ ವ್ಯಾಸಂಗಕ್ಕೆ ಕಳಿಸುವಂತೆ ಪತ್ನಿ ಸುಲೋಚನಾ ಗಂಡನಿಗೆ ಒತ್ತಾಯ ಮಾಡಿದ್ದರು. ಆದ್ರೆ ರೆಡ್ಡಿ ಮಾತ್ರ ಆಸ್ತಿ ಮಾರಲು ಸಿದ್ಧವಿರಲಿಲ್ಲ. ಇಬ್ಬರು ಪುತ್ರಿಯರ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ಮನೆಯಲ್ಲಿ ಆಗಾಗ ಜಗಳ ಹಾಗೂ ಹೊಡೆಯೋದು ನಡೆಯುತ್ತಿತ್ತು ಎಂದು ಪೊಲೀಸರು ಹೇಳಿರುವುದಾಗ ಮಾಧ್ಯಮವೊಂದು ವರದಿ ಮಾಡಿದೆ.

Comments

Leave a Reply

Your email address will not be published. Required fields are marked *