ತಂಪು ಪಾನೀಯ ನೀಡಿ ಅತ್ಯಾಚಾರ: 14ರ ಬಾಲೆ ಈಗ 3 ತಿಂಗಳ ಗರ್ಭಿಣಿ

ಹೈದರಾಬಾದ್: ತೆಲಗು ದೇಶಂ ಪಾರ್ಟಿ (ಟಿಡಿಪಿ) ಕಾರ್ಯಕರ್ತನೊಬ್ಬ 14 ವರ್ಷದ ಬಾಲಕಿಗೆ ತಂಪು ಪಾನೀಯದ ಆಮಿಷ ಒಡ್ಡಿ ನಿರಂತರ ಅತ್ಯಾಚಾರ ಎಸಗಿದ್ದು, ಸದ್ಯ ಆಕೆ ಈಗ ಮೂರು ತಿಂಗಳು ಗರ್ಭಿಣಿಯಾಗಿರುವ ಪ್ರಕರಣ ಆಂಧ್ರಪ್ರದೇಶದ ಗುಂಟೂರ್ ನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಅತ್ಯಾಚಾರ ಸಂತ್ರಸ್ತ ಬಾಲಕಿಯು ಕೆಲವು ದಿನಗಳಿಂದ ಪ್ರಜ್ಞೆ ತಪ್ಪಿ ಬೀಳುತ್ತಿದ್ದಳು. ಅನುಮಾನ ಬಂದ ಹಿನ್ನೆಲೆಯಲ್ಲಿ ಪೋಷಕರು ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಈ ವೇಳೆ ಬಾಲಕಿ ಮೂರು ತಿಂಗಳ ಗರ್ಭಿಣಿಯಾಗಿರುವ ವಿಚಾರ ಬೆಳಕಿಗೆ ಬಂದಿದೆ.

ಪೋಷಕರು ಆಕೆಯನ್ನು ವಿಚಾರಿಸಿದಾಗ, ಟಿಡಿಪಿ ಕಾರ್ಯಕರ್ತನೊಬ್ಬ ಅತ್ಯಾಚಾರ ಮಾಡಿ 100 ರೂಪಾಯಿ ನೀಡಿ, ಯಾರಿಗೂ ಹೇಳದಂತೆ ಎಚ್ಚರಿಕೆ ನೀಡಿದ್ದ ಎಂದು ಬಾಯಿಬಿಟ್ಟಿದ್ದಾಳೆ.

ಆರೋಪಿಯು ಮಾಬುಬ್ ವಾಲಿ(43) ಆಗಿದ್ದು, ಬಾಲಕಿಯ ನೆರೆಮನೆಯವನು. ಅತ್ಯಾಚಾರ ಮಾಡಿದ ನಂತರ, ನಿತ್ಯವೂ ಆಕೆಗೆ ತಂಪು ಪಾನೀಯ ಆಮಿಷ ಒಡ್ಡಿ ತನ್ನ ಮನೆಗೆ ಕರೆಸಿಕೊಂಡು ಅತ್ಯಾಚಾರ ಎಸಗುತಿದ್ದ.

ಆರೋಪಿಯು ಸ್ಥಳೀಯ ಸಂಸ್ಥೆಯ ಮುಖ್ಯಸ್ಥನಾಗಿದ್ದು, ಹೆಂಡತಿಯಿಂದ ವಿಚ್ಛೇದನ ಪಡೆದಿದ್ದಾನೆ. ಅವನಿಗೆ ಮಕ್ಕಳು ಮೊಮ್ಮಕ್ಕಳಿದ್ದಾರೆ. ಕೆಲವು ದಿನಗಳ ಹಿಂದೆ ನಮ್ಮ ಕುಟುಂಬಕ್ಕೆ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದ. ಆದರೆ ಇಂತಾ ಹೀನ ಕೃತ್ಯ ಎಸಗುತ್ತಾನೆಂದು ನಮಗೆ ತಿಳಿದಿರಲಿಲ್ಲ ಎಂದು ಸಂತ್ರಸ್ತೆಯ ಅಕ್ಕ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.

ಆರೋಪಿಗೆ ತಕ್ಕ ಶಿಕ್ಷೆಯಾಗಬೇಕು. ಅತ್ಯಾಚಾರಿಯನ್ನು ಸಾರ್ವಜನಿಕರ ಮುಂದೆ ನೇಣು ಹಾಕಬೇಕು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಪ್ರತಿಕ್ರಿಯೆ ನೀಡಿದ್ದಾರೆ.

ಸದ್ಯ ಬಾಲಕಿಗೆ ಗುರಾಜಾಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆಯ ಅಗತ್ಯಬಿದ್ದರೆ ಆಕೆಯನ್ನು ಗುಂಟೂರು ಆಸ್ಪತ್ರೆಗೆ ಕಳುಹಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *