ಅನಂತಕುಮಾರ ಹೆಗ್ಡೆ ಗ್ರಾಮ ಪಂಚಾಯ್ತಿ ಸದಸ್ಯನಾಗಲೂ ನಾಲಾಯಕ್: ಸಿಎಂ

ಧಾರವಾಡ: ಕೇಂದ್ರ ಸಚಿವ ಅನಂತಕುಮಾರ ಹೆಗ್ಡೆ ಗ್ರಾಮ ಪಂಚಾಯ್ತಿ ಸದಸ್ಯನಾಗಲೂ ನಾಲಾಯಕ್ ಎಂದು ಜಿಲ್ಲೆಯ ಗರಗ ಗ್ರಾಮದಲ್ಲಿ ನಡೆದ ಸಾಧನಾ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಅನಂತಕುಮಾರ ಹೆಗ್ಡೆ ಅವರಿಗೆ ಎರಡು ಮುಖವಿದೆ. ಅಂಬೇಡ್ಕರ್ ಬರೆದ ಸಂವಿಧಾನದ ಬಗ್ಗೆ ಯಾವತ್ತೂ ಗೌರವ ಇಲ್ಲ. ಅದನ್ನ ಬದಲಾವಣೆ ಮಾಡೋಕೆ ಆರ್‍ಎಸ್‍ಎಸ್ ಪ್ಲಾನ್ ಮಾಡುತ್ತಿದೆ. ಭಾರತವನ್ನು ಕೇವಲ ಹಿಂದೂಸ್ತಾನವನ್ನು ಮಾಡೋದು, ಏಕರೂಪ ಸಂಹಿತೆ ತರಿಸೋದು, ರಾಮ ಮಂದಿರ ಕಟ್ಟೊದೇ ಅವರ ಉದ್ದೇಶವಾಗಿದೆ. ಅವರಷ್ಟು ಕೀಳುಮಟ್ಟಕ್ಕೆ ಹೋಗಿ ನಾನು ಮಾತನಾಡಲ್ಲ. ನಮಗೆ ಸಂಸದೀಯ ಮತ್ತು ಸಂಸ್ಕೃತಿ ಭಾಷೆ ಗೊತ್ತಿದೆ ಅಂತ ಸಿಎಂ ಕಿಡಿಕಾರಿದ್ರು.

ಉತ್ತರ ಕನ್ನಡ ಜಿಲ್ಲೆಯ ಎಂಪಿ ಅನಂತಕುಮಾರ ಹೆಗ್ಡೆ, ಕುಮಟಾ ಮತ್ತು ಹೊನ್ನಾವರದಲ್ಲಿ ಬೆಂಕಿ ಹಚ್ಚಿಬಿಡಿ ಅಂತಾ ಹೇಳ್ತಾರೆ. ರಾಜ್ಯ ಸರ್ಕಾರ ಈ ಗಲಭೆಯನ್ನು ನಿಯಂತ್ರಿಸಲು 144 ಸೆಕ್ಷನ್ ಜಾರಿಗೊಳಿಸಿ ನಿಯಂತ್ರಿಸಿತು. ಆಗ ಹಗ್ಡೆ ಸಿದ್ದರಾಮಯ್ಯನವರೇ ತಪರಾಕಿ ಸಾಕಾ, ಇನ್ನೂ ಬೇಕಾ. ಮುಂದೆ ಕಾದಿದೆ ಮಾರಿಹಬ್ಬ ಅಂತ ಹೇಳಿದ್ರು. ಮಾರಿಹಬ್ಬದಲ್ಲಿ ಪ್ರಾಣಿ ಬಲಿಯನ್ನು ನೀಡ್ತಾರೆ. ಆದ್ರೆ ಇವರು ಮನುಷ್ಯರನ್ನೇ ಬಲಿ ಕೊಡ್ತಾರೆ. ಇವರಿಗೆ ಮನುಷ್ಯತ್ವ, ಮಾನವೀಯತೆ ಎಂಬುದೇ ಇಲ್ಲ. ಇಂತಹವರು ಯಾವ ಸಮಾಜ ಬದಲಾವಣೆ ಮಾಡುತ್ತಾರೆ ಎಂದು ಹೇಳಿದ್ರು.

ಬಿಜೆಪಿ ನಾಯಕರು ಎಲ್ಲಾ ಕಡೆ ಸುಳ್ಳು ಹೇಳುತ್ತಾ ತಮಟೆ ಬಾರಿಸುತ್ತಿದ್ದಾರೆ. ಧೈರ್ಯ ಇದ್ದರೆ ಒಂದೇ ವೇದಿಕೆ ಮೇಲೆ ಬನ್ನಿ ಯಡಿಯೂರಪ್ಪನವರೇ ಎಂದು ಆಹ್ವಾನ ನೀಡಿದ್ರು. ಅನೇಕ ಆರೋಪಗಳನ್ನ ಮಾಡೋ ಶೆಟ್ಟರ್ ಅಧೀವೇಶನದಲ್ಲಿ ನಾಪತ್ತೆಯಾದರೆ, ವಿಧಾನ ಪರಿಷತ್‍ನಲ್ಲಿ ಕೂಡಾ ಈಶ್ವರಪ್ಪ ಗೈರಾಗಿದ್ರೆ ಇಂತಹವರನ್ನು ಧೈರ್ಯಶಾಲಿ ಅನ್ಬೇಕೋ, ಹೇಡಿಗಳು ಅನ್ಬೇಕೋ ಎಂದರು. ಮತ್ತೆ ಫೆಬ್ರವರಿಯಲ್ಲಿ ಬಜೆಟ್ ಮಂಡನೆ ಮಾಡ್ತೇನೆ. ಆಗ ಬಂದು ಹೇಳಲಿ ಎಂದು ಬಿಜೆಪಿ ನಾಯಕರಿಗೆ ಸಿಎಂ ಸವಾಲ್ ಹಾಕಿದ್ರು.

Comments

Leave a Reply

Your email address will not be published. Required fields are marked *