ಇಂದು ಮೂರು ನಾಮಪತ್ರ ಸಲ್ಲಿಸಿದ ಹೆಗಡೆ

ಕಾರವಾರ: ಮಂಗಳವಾರ ಸಲ್ಲಿಸಿದ್ದ ನಾಮಪತ್ರದಲ್ಲಿ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಇಂದು ಪುನಃ ಮೂರು ನಾಮಪತ್ರವನ್ನು ಉತ್ತರ ಕನ್ನಡ ಜಿಲ್ಲೆಯ ಬಿಜೆಪಿ ಲೋಕಸಭಾ ಅಭ್ಯರ್ಥಿ ಅನಂತಕುಮಾರ್ ಹೆಗಡೆ ಸಲ್ಲಿಕೆ ಮಾಡಿದ್ದಾರೆ.

ಮಂಗಳವಾರ ಸಲ್ಲಿಸಿದ್ದ ಅಫಿಡವಿಟ್ ನಲ್ಲಿ ‘ನಾಟ್ ಅಪ್ಲಿಕೇಬಲ್’ ಎಂದು ಬರೆಯುವ ಬದಲು ‘NA’ ಎಂದು ನಮೂದಿಸಲಾಗಿತ್ತು. ಈ ಕಾರಣದಿಂದ ಜಿಲ್ಲಾ ಚುನಾವಣಾಧಿಕಾರಿ ಡಾ. ಹರೀಶ್ ಕುಮಾರ್ ಅವರು ಅನಂತಕುಮಾರ್ ಹೆಗಡೆಗೆ ನಾಮಪತ್ರ ಪರಿಶೀಲನೆ ವೇಳೆ ಇದನ್ನು ಗಮನಕ್ಕೆ ತಂದಿದ್ದಾರೆ.

ಈ ಕಾರಣದಿಂದ ಇಂದು ಕಾರವಾರದ ಶಾಸಕಿ ರೂಪಾಲಿ ನಾಯ್ಕ್ ಹಾಗೂ ಪತ್ನಿ ಶ್ರೀರೂಪ ಅವರೊಂದಿಗೆ ತೆರಳಿ ಅನಂತ್‍ಕುಮಾರ್ ಹೆಗಡೆ ಪುನಃ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು ಗುರುವಾರ ಜಿಲ್ಲೆಗೆ ಆಗಮಿಸುತ್ತಿರುವುದಕ್ಕೆ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದರು. ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಜಿಲ್ಲೆಗೆ ಬರಬಹುದು. ಆದರೆ ನೈತಿಕವಾಗಿ ಬರುವ ಹಕ್ಕಿಲ್ಲ ಎಂದು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.

ಮುಖ್ಯಮಂತ್ರಿಯಾಗಿ ಒಂದು ವಾರದೊಳಗೆ ಜಿಲ್ಲೆಗೆ ಆಗಮಿಸಿ ಅರಣ್ಯ ಅತಿಕ್ರಮಣದಾರರ ಸಮಸ್ಯೆ ಬಗೆಹರಿಸುತ್ತೇನೆ ಎಂದಿದ್ದರು. ಈ ಹಿಂದೆ ಪ್ರಚಾರಕ್ಕೆ ಬಂದ ವೇಳೆಯಲ್ಲಿ ಆಶ್ವಾಸನೆ ನೀಡಿದ್ದರು. ಆದರೆ ಇಂದಿಗೂ ಸಮಸ್ಯೆ ಬಗೆಹರಿಸಿಲ್ಲ. ರೈತರ ಸಾಲವನ್ನು ಇನ್ನೂ ಮನ್ನಾ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲೆಗೆ ಬರುವ ನೈತಿಕ ಹಕ್ಕು ಅವರಿಗಿಲ್ಲ ಎಂದು ಟೀಕಿಸಿದರು.

Comments

Leave a Reply

Your email address will not be published. Required fields are marked *