ಬುದ್ಧಿಯನ್ನು ಮಾರಾಟಕ್ಕೆ ಇಟ್ಟವರು ವಿಚಾರವಾದಿಗಳು – ಬಣ್ಣ ಕಳಚಿದ್ರೆ ಅವ್ರ ಮುಖ ನೋಡಲು ಸಾಧ್ಯವಿಲ್ಲ: ಸಚಿವ ಹೆಗಡೆ

ಬೆಂಗಳೂರು: ಎಲ್ಲೊ ಓದಿ, ಕಾಪಿ ಪೇಸ್ಟ್ ಮಾಡಿ ಪಿಎಚ್ ಡಿ ಪಡೆದ ವ್ಯಕ್ತಿಗಳ ರೀತಿ ಸಾರ್ವಕರ್ ಅಲ್ಲ. ತಮ್ಮ ಭಾವನೆ, ಅನಿಸಿಕೆಗಳನ್ನು ಸಾರ್ವಕರ್ ಬರೆದಿದ್ದಾರೆ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗಡೆ ಹೇಳಿದ್ದಾರೆ.

ನಗರದ ಸುಚಿತ್ರಾ ಕಲಾ ಕೇಂದ್ರದಲ್ಲಿ ಆಯೋಜಿಸಿದ್ದ ಬಿ.ಬಿ.ಹರೀಶ್ ಅನುವಾದ `ಹಿಂದುತ್ವ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ವಿಚಾರವಾದಿಗಳು ತಾವು ಹೇಳಿದ್ದೇ ಸರಿ ಎಂದು ವಾದಿಸುತ್ತಾರೆ. ಅವರು ಬುದ್ಧಿಯನ್ನು ಮಾರಾಟಕ್ಕೆ ಇಟ್ಟಿದ್ದಾರೆ. ಅಂತಹ ಮೊಂಡು ಸ್ವಭಾವದಲ್ಲಿ ನಾನು ಬೆಳೆದಿಲ್ಲ, ಒಳ್ಳೆಯದನ್ನು ಸ್ವೀಕರಿಸುವುದು ನನಗೆ ಗೊತ್ತು ಎಂದು ಹೇಳಿದರು.

ವಿಚಾರವಾದಿಗಳು ನಾಟಕೀಯ ಜೀವನ ಮಾಡುತ್ತಿದ್ದಾರೆ. ಅವರು ಜಾತ್ಯತೀತ ಬಣ್ಣ ಹಚ್ಚಿಕೊಂಡು ಬಣ್ಣ ಕಳಚಿದ ಮೇಲೆ ಅವರ ಮುಖ ನೋಡಲು ಸಾಧ್ಯವಾಗುವುದಿಲ್ಲ. ಕೆಲವು ದಿನ ವಿದೇಶದಲ್ಲಿದ್ದು, ಮತ್ತೇ ಭಾರತಕ್ಕೆ ಬಂದು ದೇಶದ ಬಗ್ಗೆ ಕೀಳಾಗಿ ಮಾತನಾಡುತ್ತಾರೆ. ವಿದೇಶದಲ್ಲಿ ಕಲಿತ ನಾಲ್ಕು ಪದಗಳ ಬಳಕೆಯಲ್ಲಿಯೇ ದೇಶವನ್ನು ತೆಗಳಿ ಮೆಚ್ಚುಗೆ ಪಡೆಯಲು ಕೆಲವರು ತುಡಿಯುತ್ತಿರುತ್ತಾರೆ ಎಂದು ವ್ಯಂಗ್ಯವಾಡಿದರು.

ಹಿಂದೂಗಳು ಎಲ್ಲಿಂದಲೋ ವಲಸೆ ಬಂದವರಲ್ಲ. ಸಂಸ್ಕೃತಿ, ಇತಿಹಾಸ ಗೊತ್ತಿಲ್ಲದ ವಿಚಾರವಾದಿಗಳು ಅವರಿಗೆ ಬೇಕಾದ ಹಾಗೇ ಮಾತನಾಡುತ್ತಾರೆ. ಹಿಂದುತ್ವ ನಾಲ್ಕು ಜನ ಕವಿಗಳು ಬರೆದ ಸಾಹಿತ್ಯವಲ್ಲ. ಹಿಂದುತ್ವಕ್ಕೆ ಸಾವಿರ ವರ್ಷಗಳ ಇತಿಹಾಸವಿದೆ, ಹಿಂದುತ್ವ ರಾಜಕಾರಣದ ಫುಟ್ಬಾಲ್ ಅಲ್ಲ ಎಂದರು.

ಹಿಂದುತ್ವ ರಾತ್ರಿ ಬಿದ್ದ ಕನಸು ಅಲ್ಲ, ಅದು ಬದುಕಿನ ಸಿದ್ಧಾಂತವಾಗಿದೆ. ಸೊನ್ನೆ ಇಲ್ಲದೆ ಜಗತ್ತು ಬದಲಾವಣೆ ಆಗುತ್ತಿರಲಿಲ್ಲ ಎಂದು ಐನ್‍ಸ್ಟೀನ್ ಹೇಳುತ್ತಾರೆ. ಹಾಗೇ ನಾವು ಹಿಂದುತ್ವದ ಬಗ್ಗೆ ಮಾತನಾಡಿದರೆ ಅದು ಸಂವಿಧಾನಕ್ಕೆ ಮಾಡಿದ ಅಪರಾಧ ಎನ್ನುತ್ತಾರೆ. ಅಲ್ಲದೇ ನಮ್ಮನ್ನು ಜಾತ್ಯಾತೀತ ವಿರೋಧಿ ಎಂದು ಕರೆಯುತ್ತಾರೆ. ಬೆಕ್ಕಿನ ಹಾಗೇ ಮೀಯಾವ್ ಅಂದ್ರೆ ಮಾತ್ರ ನೀನು ಜಾತ್ಯಾತೀತ ಎನ್ನುತ್ತಾರೆ. ಕ್ರೈಸ್ತರು, ಮುಸ್ಲಿಮರು ತಮ್ಮ ಧರ್ಮದ ಬಗ್ಗೆ ಎದೆತಟ್ಟಿ ಹೇಳಿಕೊಳ್ಳುತ್ತಾರೆ. ಆದರೆ ಹಿಂದೂಗಳು ಹೇಳಿಕೊಳ್ಳುವುದಿಲ್ಲ. ಏಕಂದರೆ ನಮಗೆ ನಮ್ಮ ರಕ್ತದ ಪರಿಚಯವಿಲ್ಲ ಎಂದು ಅವರು ಹೇಳಿದರು.

ಹಿಂದುತ್ವವನ್ನು ಚಿಕ್ಕದಾಗಿ ಮಾಡುವ ಪ್ರಯತ್ನಕ್ಕೆ ಕೈ ಹಾಕಬಾರದು. ವಿದೇಶಿ ಬಂಡವಾಳಕ್ಕೆ ಬುದ್ಧಿ ಜೀವಿಗಳು ತಮ್ಮನ್ನ ಮಾರಿಕೊಂಡಿದ್ದು, ಹಿಂದುತ್ವವನ್ನು ಕೀಳಾಗಿ ಕಾಣುತ್ತಿದ್ದಾರೆ. ರಾಮ, ಕೃಷ್ಣ, ಗಣೇಶ, ಸುಬ್ರಮಣ್ಯರು ಬ್ರಾಹ್ಮಣರಲ್ಲ. ಜಾತಿಯಿಂದ ನಾವು ಗೌರವ ನೀಡಿಲ್ಲ, ಬದಲಾಗಿ ಶ್ರೇಷ್ಠ ವಿಚಾರಗಳನ್ನು ಒಪ್ಪಿಕೊಂಡಿದ್ದೇವೆ. ಸತ್ಯ ಒಪ್ಪಿಕೊಳ್ಳುವು, ಜಗತ್ತಿನ ಒಳ್ಳೆಯ ಸ್ವಭಾವವೇ ಹಿಂದುತ್ವವಾಗಿದೆ. ಇಂತಹ ವಿಚಾರಗಳು ಮುರ್ಖ ವಿಚಾರವಾದಿಗಳಿಗೆ ಅರ್ಥವಾಗುವುದಿಲ್ಲ. ಯಾರದ್ದೋ ನಾಲಿಗೆ ಹೊರಳಿದ್ದಕ್ಕೆ ನಾವು ಹಿಂದೂಗಳು ಆಗಿಲ್ಲ ಎಂದು ಹೇಳುವ ಮೂಲಕ ವಿಚಾರವಾದಿಗಳನ್ನು ಕುಟುಕಿದರು.

ಮಾಧ್ಯಮಗಳ ವಿರುದ್ಧ ಕಿಡಿ: ನಾನು ಏನು ತಪ್ಪು ಮಾಡುತ್ತೇನೋ ಅದನ್ನೇ ಮಾಧ್ಯಮದವರು ಹೈಲೆಟ್ ಮಾಡುತ್ತಾರೆ. ಏಕೆಂದರೆ ಮಾಧ್ಯಮಗಳ ಸಾಮಥ್ರ್ಯ ಅಷ್ಟೇ. ಅವರು ಏನು ಹೇಳಿದರೂ ಅಂತಾ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನ ರಕ್ತದ ಪರಿಚಯ ನನಗಿದೆ. ಯಾರೋ ಏನೋ ಹೇಳಿದರು ಅಂತಾ ನನ್ನ ತನವನ್ನು ನಾನು ಬದಲಾವಣೆ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದರು.

Comments

Leave a Reply

Your email address will not be published. Required fields are marked *