ಲೋಕಲ್ ಟ್ರೈನ್ ಹತ್ತಿ ಬಂದ ಸಮುದಾಯ ನಮ್ಮದಲ್ಲ- ಪಕ್ಷಾಂತರರಿಗೆ ಹೆಗಡೆ ಟಾಂಗ್

ಕಾರವಾರ: ಲೋಕಲ್ ಟ್ರೈನ್ ಹತ್ತಿ ಬಂದ ಸಮುದಾಯ ನಮ್ಮದಲ್ಲ ಎಂದು ಸಂಸದ ಅನಂತಕುಮಾರ್ ಹೆಗಡೆ ಅವರು ಪಕ್ಷಾಂತರ ಮಾಡುವವರಿಗೆ ಟಾಂಗ್ ನೀಡಿದ್ದಾರೆ.

ಇಂದು ಕಾರವಾರದ ಆಶ್ರಮ ಮಠ ರಸ್ತೆಯಲ್ಲಿನ ಹಳದಿಪುರಕರ್ ಮನೆಯಲ್ಲಿ ನಡೆದ ಗಾಂಧಿ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಲೋಕಲ್ ಟ್ರೈನ್ ಹತ್ತಿ ಬಂದ ಸಮುದಾಯ ನಮ್ಮದಲ್ಲ. ಆ ಪಕ್ಷದಲ್ಲಿ ಇರುವುದು, ಅಲ್ಲಿ ಸೀಟ್ ಕೊಟ್ಟಿಲ್ಲ ಎಂದರೆ ಈ ಪಕ್ಷಕ್ಕೆ ಬರುವುದು ಇತ್ತೀಚೆಗೆ ಶುರುವಾಗಿ ಹೋಗಿದೆ. ಆದರೆ ನಾವು ಆ ರೀತಿ ಮಾಡಿದವರಲ್ಲ. ನಮ್ಮದು ಬಲಿಷ್ಠ ಸಂಘಟನೆಯಾಗಿದ್ದು, ಪ್ರತಿಯೊಂದು ವಿಚಾರಕ್ಕೂ ಸ್ಪಷ್ಟವಾದ ನಿಲುವು ನಮ್ಮಲ್ಲಿದೆ ಎಂದು ಹೇಳಿದರು.

ಎಲ್ಲ ಕಡೆ ಹೋದರೂ ಒಂದೇ ಮುಖ ನೋಡುತ್ತಿದ್ದೇವೆ. ಶತಾಬ್ಧಿ ಎಕ್ಸ್‍ಪ್ರೆಸ್ ಹಾಗೂ ಲೋಕಲ್ ಟ್ರೈನ್ ಯಾವುದೇ ಹತ್ತಿದರೂ ಸಹ ನಾವು ಒಂದೇ ಮುಖವನ್ನು ಕಾಣುತ್ತೇವೆ. ಈ ತರ ಟ್ರೈನ್ ಹತ್ತಿ ಬಂದಿರುವ ಸಮುದಾಯ ನಮ್ಮದಲ್ಲ ಎಂದು ಕುಟುಕಿದರು.

ದೇಶದ ಆರ್ಥಿಕತೆ ಬಿದ್ದು ಹೋಗಿದೆ ಎಂದು ಸೋಗಲಾಡಿ ಆರ್ಥಿಕ ತಜ್ಞರ ಜಿಜ್ಞಾಸೆ ಶುರುವಾಗಿದೆ. ಸೋಗಲಾಡಿ ವಿಚಾರವಾದಿಗಳು, ಆರ್ಥಿಕ ತಜ್ಞರು ಭಾಷಣ ಬಿಗಿಯುತ್ತಿದ್ದಾರೆ. ನಾವು ರಾಜಕೀಯಕ್ಕೆ ಬರಬೇಕು ಎಂಪಿ, ಎಂಎಲ್‍ಎ ಆಗಬೇಕು, ನಮ್ಮ ಸರ್ಕಾರ ಬರಬೇಕು ಎಂದು ಪಕ್ಷ ಕಟ್ಟಿಲ್ಲ. ರಾಜಕೀಯದಲ್ಲಿ ಮೇಲಾಟಗಳು ಸಹಜ. ಆದರೆ ನಮಗೆ ನಮ್ಮದೇ ಆದ ಸ್ಪಷ್ಟತೆ ಇದೆ, ಗುರಿ ಇದೆ ಎಂದು ಟೀಕಾಕಾರ ಆರೋಪಗಳಿಗೆ ತಿರುಗೇಟು ನೀಡಿದರು.

Comments

Leave a Reply

Your email address will not be published. Required fields are marked *