ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಬಿಜೆಪಿ ಸಚಿವ ಆನಂದ್ ಸಿಂಗ್ ಭೇಟಿಯಾಗಿ ಮಾತನಾಡಿದ್ದು ಭಾರೀ ಕುತೂಹಲ ಮೂಡಿಸಿದೆ.
ಇತ್ತೀಚೆಗಷ್ಟೇ ಬಿಜೆಪಿ ಸಚಿವರು ನಮ್ಮ ಸಂಪರ್ಕದಲ್ಲಿ ಇದ್ದಾರೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದರು. ಇದರ ಬೆನ್ನಲ್ಲೇ ಇಂದು ಡಿ.ಕೆ. ಶಿವಕುಮಾರ್ ಅವರ ಸದಾಶಿವನಗರ ನಿವಾಸಕ್ಕೆ ಆನಂದ್ ಸಿಂಗ್ ಅವರು ಖಾಸಗಿ ಕಾರಿನಲ್ಲಿ ಆಗಮಿಸಿದ್ದರು. ತಮ್ಮ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಬಗ್ಗೆ ಈಗಾಗಲೇ ಆನಂದ್ ಸಿಂಗ್ ಅಸಮಾಧಾನ ಹೊರ ಹಾಕಿದ್ದಾರೆ. ಅಸಮಾಧಾನ ಪ್ರಕಟವಾದ ಒಂದು ವಾರದ ಒಳಗಡೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಇದ್ದಕ್ಕಿದ್ದಂತೆ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಇದನ್ನೂ ಓದಿ: ಆರೋಗ್ಯ ಕಾರ್ಯಕರ್ತರು ಸೇನಾನಿಗಳಂತೆ ಕೆಲಸ ಮಾಡಿದ್ದಾರೆ: ಕೋವಿಂದ್

ಇನ್ನು ಈ ಕುರಿತಂತೆ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್ ಅವರು, ಆನಂದ್ ಸಿಂಗ್ ರಾಜಕೀಯವಾಗಿ ಮಾತನಾಡಲು ಬಂದಿರಲಿಲ್ಲ. ಅವರು ಒಬ್ಬ ಮಂತ್ರಿ. ತುಂಗಾ ಆರತಿ ಮಾದರಿಯಲ್ಲಿ ಸಂಗಮದಲ್ಲಿ ಕಾವೇರಿ ಆರತಿ ಮಾಡುವ ಯೋಜನೆ ಇದೆ. ಟೂರಿಸಂ ಡೆವಲಪ್ಮೆಂಟ್ ಮಾಡಲು ಮನವಿ ಮಾಡಿದ್ದೆ. ಹೀಗಾಗಿ ಖುದ್ದು ಸಚಿವರು ಈ ಬಗ್ಗೆ ವಿವರಣೆ ನೀಡಲು ಬಂದಿದ್ದರು. ರಾಜಕೀಯ ಮನೆಯಲ್ಲಿ ಮಾತಾಡಲು ಸಾಧ್ಯವಿಲ್ಲ. ರಾಜಕೀಯ ಮಾತನಾಡುವುದು ಏನೇ ಇದ್ದರೆ ಹೋಟೆಲ್‍ನಲ್ಲೋ, ಗೆಸ್ಟ್ ಹೌಸ್‍ನಲ್ಲೋ ಎಲ್ಲೋ ಮಾತಾಡಿಕೊಳ್ಳುತ್ತಿದ್ದೆವು. ಆ ಕಾಮನ್ ಸೆನ್ಸ್ ನಮಗೂ ಇರಬೇಕು, ನಿಮಗೂ ಇರಬೇಕು ಎಂದು ಗರಂ ಆಗಿ ಪ್ರತಿಕ್ರಿಯಿಸಿದ್ದಾರೆ.

ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ ಅವರು, ದೇಶದಲ್ಲಿ ಕೋವಿಡ್‍ನಿಂದ ನರಳಿದ ಜನರಿಗೆ ಸರ್ಕಾರ ಯಾವ ರೀತಿ ಸಹಾಯ ಮಾಡುತ್ತದೆ ಎಂದು ನಿರೀಕ್ಷೆ ಮಾಡುತ್ತಿದ್ದೇವೆ. ರಾಜ್ಯದಲ್ಲಿ ನಾಲ್ಕು ಲಕ್ಷ ಜನ ಸಾವನ್ನಪ್ಪಿದ್ದಾರೆ. ಅವರಿಗೆ ಯಾವ ರೀತಿ ಸಹಾಯ ಮಾಡುತ್ತದೆ ನೋಡುತ್ತೇವೆ. ಕೆಲವರಿಗೆ ಸೀಮಿತವಾಗಿ ಒಂದೊಂದು ಲಕ್ಷ ಕೊಡುವುದಕ್ಕೆ ಮುಂದಾಗಿದ್ದಾರೆ. ಆದರೆ ನಾಲ್ಕು ಲಕ್ಷ ಕೊಡಬೇಕು ಎಂದು ನಾವು ಒತ್ತಾಯ ಮಾಡಿದ್ದೇವೆ. ಕೋರ್ಟ್ ಸಹ ಹೇಳಿತ್ತು. ರೈತರಿಗೆ, ಕಾರ್ಮಿಕರಿಗೆ ನಷ್ಟವಾಗಿದೆ. ಅನೇಕ ಜನ ಕೆಲಸ ಕಳೆದುಕೊಂಡಿದ್ದಾರೆ. ಇವರೆಲ್ಲರ ಪಟ್ಟಿ ಸಿದ್ದಪಡಿಸಿ, ಅವರಿಗೆ ಹಣ ಕೊಡುತ್ತದೆ ಎಂದು ನಂಬಿಕೆಯಿದೆ ಎಂದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಶಿಥಿಲಗೊಂಡ ಕಟ್ಟಡ, ಯಾವಾಗ ಬೇಕಾದರೂ ಬೀಳಬಹುದು: ದಿನೇಶ್ ಶರ್ಮಾ

Leave a Reply