ಪೂಲ್‍ನಲ್ಲಿ ಕೂಲ್ ಪೋಸ್ ನೀಡಿದ ಗರ್ಭಿಣಿ ಆ್ಯಮಿ

ನವದೆಹಲಿ: ನಟಿ ಆ್ಯಮಿ ಜಾಕ್ಸನ್ ಕುಟುಂಬಕ್ಕೆ ಶೀಘ್ರದಲ್ಲೇ ಹೊಸ ಸದಸ್ಯನ ಆಗಮನವಾಗಲಿದೆ. ಗರ್ಭಿಣಿಯಾದಾಗಿನಿಂದಲೂ ಹೊಸ ಹೊಸ ಫೋಟೋಶೂಟ್‍ನಲ್ಲಿ ಆ್ಯಮಿ ಮಿಂಚುತ್ತಾ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿಯಲ್ಲಿದ್ದಾರೆ. ಹಾಗೆಯೇ ಈಗ ಸ್ವಿಮಿಂಗ್ ಪೂಲ್‍ನಲ್ಲಿ ಆ್ಯಮಿ ಪ್ರಿಯಕರ ಜಾರ್ಜ್ ಪನಯೌಟು ಜೊತೆ ಇರುವ ಕೂಲ್ ಫೋಟೋವನ್ನು ಹಂಚಿಕೊಂಡಿದ್ದಾರೆ.

ಸ್ವಿಮಿಂಗ್ ಪೂಲ್‍ನಲ್ಲಿ ಫುಲ್ ಮಸ್ತಿ ಮಾಡುತ್ತಾ, ಖುಷಿಯಿಂದ ಜಾರ್ಜ್ ಜೊತೆ ಕಾಲ ಕಳೆದ ಫೋಟೋವನ್ನು ಆ್ಯಮಿ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಕೂಲ್ ಫೋಟೋಗೆ ಆ್ಯಮಿ ಅಭಿಮಾನಿಗಳು ಮನಸೋತಿದ್ದಾರೆ. ಆ್ಯಮಿ ಗರ್ಭಿಣಿಯಾದಾಗಿನಿಂದಲೂ ಹೊಸ ಹೊಸ ಫೋಟೋಶೂಟ್ ಮಾಡಿಸುತ್ತ ತಮ್ಮ ಪ್ರೆಗ್ನೆಸ್ಸಿಯನ್ನು ಎಂಜಾಯ್ ಮಾಡುತ್ತಿದ್ದಾರೆ. ವಿಧವಿಧವಾಗಿ ಫೋಟೋಗೆ ಪೋಸ್ ಕೊಡುತ್ತಾ ಮಿಂಚುತ್ತಿದ್ದಾರೆ.

ಸಿನಿಮಾಗಳಿಂದ ದೂರ ಉಳಿದಿರುವ ಗರ್ಭಿಣಿ ಆ್ಯಮಿ ಸಂಪೂರ್ಣ ವಿಶ್ರಾಂತಿಯಲ್ಲಿದ್ದಾರೆ. ಈ ಹಿಂದೆ ಆ್ಯಮಿ ಯೋಗ ಮಾಡುತ್ತಿರುವ ಫೋಟೋ ಹಂಚಿಕೊಂಡಿದ್ದರು. ಗರ್ಭಾವಸ್ಥೆಯಲ್ಲಿ ಆರೋಗ್ಯ ಕಾಯ್ದುಕೊಳ್ಳುವುದು ಅವಶ್ಯಕ ಹೀಗಾಗಿ ಯೋಗ, ಧ್ಯಾನ ಮಾಡುತ್ತಿದ್ದೇನೆ ಎಂದು ತಿಳಿಸಿದ್ದರು. ಅಲ್ಲದೆ ಟಾಪ್‍ಲೆಸ್ ಆಗಿರುವ ಫೋಟೋವನ್ನು ಆ್ಯಮಿ ಜಾಕ್ಸನ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದರು. ಆ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು.

2018 ಜನವರಿ 1ರಂದು ಆ್ಯಮಿ ಜಾಕ್ಸನ್ ಉದ್ಯಮಿ ಜಾರ್ಜ್ ಪನಯೌಟು ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳವುದಾಗಿ ಘೋಷಿಸಿದ್ದರು. ಬ್ರಿಟನ್ ಮದರ್ಸ್ ಡೇಯಂದು ಆ್ಯಮಿ ಜಾಕ್ಸನ್ ಗೆಳೆಯನೊಂದಿಗೆ ಕುಳಿತ ಬೇಬಿ ಬಂಪ್ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಾಕಿಕೊಳ್ಳುವ ಮೂಲಕ ತಾಯಿ ಆಗುತ್ತಿರುವ ವಿಷಯವನ್ನು ತಿಳಿಸಿದ್ದರು. ಗರ್ಭಿಣಿಯಾದ ಬಳಿಕ ಗೆಳೆಯ ಜಾರ್ಜ್ ಜೊತೆ ಮೇ 5ರಂದು ನಿಶ್ಚಿತಾರ್ಥ ಸಹ ಮಾಡಿಕೊಂಡಿದ್ದರು.

ಗರ್ಭಿಣಿಯಾದ ನಂತರವೂ ಆ್ಯಮಿ ಹಲವು ಬಾರಿ ಬೇಬಿ ಬಂಪ್ ಫೋಟೋ ಹಂಚಿಕೊಂಡಿದ್ದರು. ಆದರೆ ಆ್ಯಮಿಯ ಟಾಪ್‍ಲೆಸ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿತ್ತು.

ಆ್ಯಮಿ 6 ತಿಂಗಳ ಗರ್ಭಿಣಿಯಾಗಿದ್ದಾಗ ಯುರೋಪ್‍ಗೆ ರೋಡ್ ಟ್ರಿಪ್ ಹೋಗಿದ್ದರು. ವಿವಿಧ ಸಾಮಾಜಿಕ ಕಾರಣಗಳಿಗಾಗಿ ಹಣವನ್ನು ಸಂಗ್ರಹಿಸಲು ಕ್ಯಾಶ್ ಆ್ಯಂಡ್ ರಾಕೆಟ್ ಸಂಸ್ಥೆ ಜೊತೆ ಕೈಜೊಡಿಸಿ ಜಾಗತಿಕ ಜಾಗೃತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆಗ ಈ ಕೆಲಸ ನನಗೆ ತುಂಬಾ ಖುಷಿ ತಂದಿದೆ ಎಂದು ಖುಷಿಯನ್ನು ಹಂಚಿಕೊಂಡಿದ್ದರು.

Comments

Leave a Reply

Your email address will not be published. Required fields are marked *