ಪಾಕ್ ಪ್ರೇಮಿ ಅಮೂಲ್ಯಗೆ ಖಾಕಿ ಡ್ರಿಲ್ – ಬಸವೇಶ್ವರ ನಗರ ಠಾಣೆ ಸುತ್ತಮುತ್ತ ಪೊಲೀಸ್ ಸರ್ಪಗಾವಲು

ಬೆಂಗಳೂರು: ಪಾಕ್ ಪರ ಘೋಷಣೆ ಕೂಗಿದ್ದ ಅಮೂಲ್ಯಳನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಬಸವೇಶ್ವರ ನಗರದ ಪೊಲೀಸ್ ಠಾಣೆಯಲ್ಲಿ ಅಮೂಲ್ಯಳನ್ನು ವಿಚಾರಣೆ ನಡೆಸಲಾಗುತ್ತಿದ್ದು, ಮುನ್ನೇಚ್ಚರಿಕೆಗಾಗಿ ಠಾಣೆಯ ಸುತ್ತಮುತ್ತ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.

ಫೆಬ್ರವರಿ 20ರಂದು ಬೆಂಗಳೂರಲ್ಲಿ ಪಾಕ್ ಪರ ಘೋಷಣೆ ಕೂಗಿದ್ದ ಅಮೂಲ್ಯಳನ್ನ ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದರು. ನಂತರ ಐದು ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿರಿಸಲಾಗಿತ್ತು. ಮಂಗಳವಾರ ಅಮೂಲ್ಯಳ ನ್ಯಾಯಾಂಗ ಬಂಧನ ಅವಧಿ ಮುಕ್ತಾಯವಾದ ಹಿನ್ನೆಲೆ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸುವಂತೆ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಪೊಲೀಸರ ಮನವಿಯನ್ನ ತಿರಸ್ಕರಿಸಿದ ನ್ಯಾಯಾಲಯ ಆರೋಪಿ ಅಮೂಲ್ಯಳನ್ನ ಕೊರ್ಟ್ ಗೆ ಹಾಜರು ಪಡಿಸುವಂತೆ ಸೂಚಿಸಿತ್ತು.

ಭದ್ರತಾ ದೃಷ್ಟಿಯಿಂದ ಮಂಗಳವಾರ ಸಂಜೆ ಐದನೇ ಎಸಿಎಂಎಂ ನ್ಯಾಯಾಧೀಶರ ನಿವಾಸಕ್ಕೆ ಆರೋಪಿ ಅಮೂಲ್ಯಳನ್ನ ಎಸ್‍ಐಡಿ ತಂಡ ಹಾಜರುಪಡಿಸಿತ್ತು. ನಂತ್ರ ಆರೋಪಿಯನ್ನ ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಐದನೇ ಎಸಿಎಂಎಂ ನ್ಯಾಯಾಧೀಶರು ಆದೇಶಿಸಿದರು.

ಆರೋಪಿ ಅಮೂಲ್ಯಳನ್ನ ವಶಕ್ಕೆ ಪಡೆದ ಪೊಲೀಸರು ಬಸವೇಶ್ವರ ನಗರ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ. ಎಸ್.ಐ.ಟಿ ತನಿಖಾ ತಂಡದ ಮುಖ್ಯಸ್ಥ ಡಿಸಿಪಿ ರಮೇಶ್ ಬಾನೋತ್ ಸಮ್ಮುಖದಲ್ಲಿ ಆರೋಪಿ ಹೇಳಿಕೆಯನ್ನು ವಿಡಿಯೋ ರೆಕಾರ್ಡಿಂಗ್ ಮಾಡಿಸಿ ಹೇಳಿಕೆ ದಾಖಲಿಸಲಾಯ್ತು. ಕಳೆದ ಮೂರು ವರ್ಷಗಳಿಂದ ಅಮೂಲ್ಯ ಬಸವೇಶ್ವರ ನಗರದ ಪಿಜಿ ಯಲ್ಲಿ ಇದ್ದುಕೊಂಡು ಹಲವು ಹೋರಾಟಗಳಲ್ಲಿ ಸಕ್ರಿಯಳಾಗಿದ್ದಳು ಅಂತ ಹೇಳಲಾಗ್ತಿದೆ. ಈ ಹಿನ್ನೆಲೆ ಮಹಿಳಾ ಪಿ.ಎಸ್.ಐ ನೇತೃತ್ವದಲ್ಲಿ ಅಮೂಲ್ಯಳ ಪಿಜಿಯನ್ನ ಸರ್ಚ್ ವಾರೆಂಟ್ ಪಡೆದು ಮಹಜರ್ ನಡೆಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.

ಸದ್ಯ ನಾಲ್ಕು ದಿನಗಳ ಆರೋಪಿಯನ್ನ ಕಸ್ಟಡಿಗೆ ಪಡೆದಿರೋ ಎಸ್.ಐ.ಟಿ. ಟೀಂ ಪ್ರಶ್ನೆಗಳ ಸುರಿಮಳೆಗೈತಿದ್ರೆ ಇತ್ತ ಆರೋಪಿ ಅಮೂಲ್ಯ ಮಾತ್ರ ತನ್ನ ವಕೀಲರನ್ನ ಸಂಪರ್ಕಿಸಿ ನಂತರ ತಮ್ಮ ಪ್ರಶ್ನೆಗಳಿಗೆ ಉತ್ತರಿಸ್ತೀನಿ ಅಂತಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ.

Comments

Leave a Reply

Your email address will not be published. Required fields are marked *