ಮೈತ್ರಿಗೆ ಬಂಡಾಯದ ಬಿಸಿ – ಎಐಸಿಸಿ ಸ್ಥಾನಕ್ಕೆ ರಾಜೀನಾಮೆ, ಪಕ್ಷೇತರನಾಗಿ ಅಮೃತ್ ಶೆಣೈ ಸ್ಪರ್ಧೆ

ಉಡುಪಿ: ಕಾಂಗ್ರೆಸ್ ಒಳಗೆ ಭಿನ್ನಮತ ಶುರುವಾಗಿದೆ. ಕಾಂಗ್ರೆಸ್ ಪ್ರಾಬಲ್ಯವಿರುವ ಉಡುಪಿ-ಚಿಕ್ಕಮಗಳೂರು ಕ್ಷೇತ್ರವನ್ನು ಅಸ್ತಿತ್ವವೇ ಇಲ್ಲದ ಜೆಡಿಎಸ್‍ಗೆ ಬಿಟ್ಟುಕೊಟ್ಟಿದ್ದೇ ಈ ಗೊಂದಲಕ್ಕೆ ಕಾರಣವಾಗಿದ್ದು, ಭಿನ್ನಮತ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್‍ಗೆ ದುಬಾರಿಯಾಗುವ ಸಾಧ್ಯತೆ ಇದೆ.

ಕಾಂಗ್ರೆಸ್ ಅಭ್ಯರ್ಥಿಗೆ ಟಿಕೆಟ್ ನೀಡದ ಬಗ್ಗೆ ನೊಂದುಕೊಂಡಿರುವ ಎಐಸಿಸಿ ಸದಸ್ಯ ಹಾಗೂ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಅಮೃತ್ ಶೆಣೈ ಪಕ್ಷೇತರನಾಗಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಮೈತ್ರಿ ಧರ್ಮದಂತೆ ಉಡುಪಿ ಚಿಕ್ಕಮಗಳೂರು ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟು ಕೊಡಲಾಗಿತ್ತು. ಆದರೆ ಜೆಡಿಎಸ್‍ಗೆ ಸೂಕ್ತ ಅಭ್ಯರ್ಥಿಯೇ ಇಲ್ಲದ ಕಾರಣ ಕಾಂಗ್ರೆಸ್ಸಿನ ಪ್ರಮೋದ್ ಮಧ್ವರಾಜ್ ಅವರು ಜೆಡಿಎಸ್ ಎರವಲು ಪಡೆದು ಬಿಫಾರಂ ಕೊಟ್ಟಿದ್ದಾರೆ.

ಜೆಡಿಎಸ್ ಅಸ್ತಿತ್ವವೇ ಇಲ್ಲದ ಪಕ್ಷಕ್ಕೆ ಟಿಕೆಟ್ ನೀಡಿರೋದರಿಂದ ಕಾಂಗ್ರೆಸ್ ಕಾರ್ಯಕರ್ತರು ಬೇಸರಗೊಂಡಿದ್ದರು. ಇದೀಗ ಟಿಕೆಟ್ ಆಕಾಂಕ್ಷಿಯಾಗಿದ್ದ ಉದ್ಯಮಿ, ಎಐಸಿಸಿ ಸದಸ್ಯ ಅಮೃತ್ ಶೆಣೈ, ಬಂಡಾಯವಾಗಿ ಪಕ್ಷೇತರ ಸ್ಪರ್ಧೆಗಿಳಿಯಲು ಸಿದ್ಧತೆ ಮಾಡಿದ್ದಾರೆ. ತನ್ನ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ತೀರ್ಮಾನಕ್ಕೆ ಬರುವುದಾಗಿ ತಿಳಿಸಿದ್ದಾರೆ. ಶೆಣೈ ಕಣಕ್ಕಿಳಿದರೆ ಕಾಂಗ್ರೆಸ್ ಕಾರ್ಯಕರ್ತರ ವೋಟು ಖಂಡಿತಾ ವಿಭಜನೆಯಾಗಲಿದೆ.

ಅಮೃತ್ ಶೆಣೈ ಅವರ ಮನವೊಲಿಸಲು ಪ್ರಮೋದ್ ಮಧ್ವರಾಜ್ ಮುಂದಾಗಿದ್ದರು. ಆದರೆ ಮನವೊಲಿಕೆಗೆ ಅಮೃತ್ ಶೆಣೈ ಒಪ್ಪಿಲ್ಲ. ಶೆಣೈ ಅಭಿಮಾನಿಗಳ ಅಭಿಪ್ರಾಯವನ್ನು ಕೇಳುತ್ತಿದ್ದಾರೆ. ಈ ವೇಳೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅಮೃತ್ ಶೆಣೈ, ಪಕ್ಷಕ್ಕಾಗಿ ಹಗಲಿರುಳು ಶ್ರಮಿಸಿದ್ದೇನೆ. ಕಳೆದ ಎಲ್ಲಾ ಚುನಾವಣೆಗಳಲ್ಲಿ ಎರಡು ಜಿಲ್ಲೆಗಳನ್ನು ಸುತ್ತಿದ್ದೇನೆ. ಎರಡೂ ಜಿಲ್ಲೆಯಲ್ಲಿ ಜೆಡಿಎಸ್ ಶಕ್ತಿ ಕಮ್ಮಿ ಇದ್ದರೂ ಟಿಕೆಟ್ ಕೊಟ್ಟು ಕಾಂಗ್ರೆಸ್ಸಿಗೆ ಹಿನ್ನಡೆಯಾಗಿದೆ ಎಂದು ಹೇಳಿದರು.

Comments

Leave a Reply

Your email address will not be published. Required fields are marked *