ಅಮಿತ್ ಶಾ ವಾರ್ನಿಂಗ್ ನಂತ್ರ ಬಿಜೆಪಿಯ ಮುಂದಿನ ನಡೆ ಏನು ಗೊತ್ತಾ?

ಬೆಂಗಳೂರು: ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಮೂರು ದಿನಗಳ ರಾಜ್ಯ ಪ್ರವಾಸ ಅಂತ್ಯಗೊಂಡಿದೆ. ಬಿಜೆಪಿ ಮುಖಂಡರು, ಆರ್‍ಎಸ್‍ಎಸ್ ನಾಯಕರು, ಮಠಾಧೀಶರ ಜೊತೆಗಿನ ಮ್ಯಾರಾಥಾನ್ ಸಭೆಯ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಶಾ ವಾಗ್ದಾಳಿ ನಡೆಸಿದ್ದಾರೆ.

ಸ್ವಾತಂತ್ರ್ಯ ನಂತರ ದೇಶ ಕಂಡ ಅತ್ಯಂತ ಭ್ರಷ್ಟ ಸರ್ಕಾರ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರವಾಗಿದ್ದು, ಭ್ರಷ್ಟಾಚಾರದಲ್ಲಿ ಸಿದ್ದರಾಮಯ್ಯ ಸರ್ಕಾರಕ್ಕೆ ಮೆಡಲ್ ಕೊಡಬೇಕು. ಕೇಂದ್ರ ಸರ್ಕಾರ ಏನು ಮಾಡಿದೆ ಎಂದು ಕೇಳುವ ಸಿದ್ದರಾಮಯ್ಯನವರೇ, ಬಡವರು, ರೈತರು, ದಲಿತರಿಗೆ ಕೇಂದ್ರ ಸರ್ಕಾರ ಕೊಡುತ್ತಿರುವ ಅನುದಾನ ಎಲ್ಲಿ ಹೋಗುತ್ತಿದೆ ಎಂದು ಪ್ರಶ್ನಿಸಿದರು.

ಬಡವರಿಗೆ, ರೈತರಿಗೆ ಅನುದಾನ ಯಾಕೆ ತಲುಪಿಲ್ಲ ಎಂಬುದರ ಬಗ್ಗೆ ಉತ್ತರ ನೀಡಿ ಅಂತಾ ಸಿದ್ದರಾಮಯ್ಯಗೆ ಸವಾಲ್ ಎಸೆದಿದ್ದಾರೆ. ಇಂಧನ ಸಚಿವ ಡಿ.ಕೆ ಶಿವಕುಮಾರ್ ಮನೆ ಮೇಲೆ ಐಟಿ ದಾಳಿಯಾದ ಬಳಿಕ ಅವರು ತಮ್ಮ ಸ್ಥಾನಕ್ಕೆ ಯಾಕೆ ರಾಜೀನಾಮೆ ಕೊಡಲಿಲ್ಲ ಎಂದು ಪ್ರಶ್ನಿಸಿದ್ದಾರೆ.

ಇಷ್ಟೇ ಅಲ್ಲ, ಗುಜರಾತ್ ಶಾಸಕರನ್ನು ರೆಸಾರ್ಟ್‍ನಲ್ಲಿಟ್ಟ ಬಗ್ಗೆ ಸಿದ್ದರಾಮಯ್ಯ ಸರ್ಕಾರ ಉತ್ತರ ಕೊಡಲಿ ಎಂದು ಅಮಿತ್ ಶಾ ಸವಾಲ್ ಹಾಕಿದ್ದಾರೆ. ಅಲ್ಲದೇ ರೈತರ ಬಗ್ಗೆ ಸಿಎಂಗೆ ಕಾಳಜಿ ಇಲ್ಲ. ಕರ್ನಾಟಕದ ರೈತರಿಗೆ ಸುರಕ್ಷತೆ ಇಲ್ಲ ಅಂತಾ ವಾಗ್ದಾಳಿ ನಡೆಸಿದ್ರು.

ಈ ನಡುವೆ ಗೋರಖ್‍ಪುರ ಆಸ್ಪತ್ರೆ ದುರಂತವನ್ನು ಪ್ರಶ್ನೆ ಮಾಡಿದಾಗ ಅಮಿತ್ ಶಾ ಕೋಪ ಮಾಡಿಕೊಂಡು ಭಾರತದಂಥ ದೊಡ್ಡ ದೇಶದಲ್ಲಿ ಇಂಥ ಘಟನೆಗಳು ಈ ಹಿಂದೆಯೂ ನಡೆದಿವೆ. ಘಟನೆ ಬಗ್ಗೆ ಪ್ರಧಾನಿ ದುಃಖ ವ್ಯಕ್ತಪಡಿಸಿದ್ದಾರೆ. ಟ್ವಿಟರ್ ಒಂದೇ ಮಾಧ್ಯಮ ಅಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ಅಲ್ಲಿನ ಸಿಎಂಗೆ ಸೂಚನೆ ನೀಡಿದ್ದಾರೆ. ಸುಮ್ಮನೇ ಮುಖ್ಯಮಂತ್ರಿಗಳ ರಾಜೀನಾಮೆ ಕೇಳುವುದು ಕಾಂಗ್ರೆಸ್‍ನ ಕೆಲಸ ಎಂದು ಕಿಡಿಕಾರಿದರು.

ಶುಕ್ರವಾರದಿಂದ ಪ್ರತಿಭಟನೆ: ಅಮಿತ್ ಶಾ ವಾರ್ನಿಂಗ್‍ಗೆ ಫುಲ್ ಆ್ಯಕ್ವೀವ್ ಆಗಿರುವ ಬಿಜೆಪಿ ನಾಯಕರು ಈ ಶುಕ್ರವಾರದಿಂದಲೇ ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಮುಂದಿನ ಶುಕ್ರವಾರದಿಂದ ಸತತ ಒಂದು ವಾರ ಕಾಲ, ಐಟಿ ದಾಳಿಗೆ ಒಳಗಾದ ಇಂಧನ ಸಚಿವ ಡಿ ಕೆ ಶಿವಕುಮಾರ್, ಸಚಿವ ರಮೇಶ್ ಜಾರಕಿಹೋಳಿ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಪ್ರತಿಭಟನೆ ಮಾಡುತ್ತೇವೆ. ಪಂಜಿನ ಮೆರವಣಿಗೆ, ಬೈಕ್‍ರ್ಯಾಲಿ ಮೂಲಕ ಜನ ಜಾಗೃತಿ ಮೂಡಿಸುವುದಾಗಿ ಎಂದು ರಾಜ್ಯಾಧ್ಯಕ್ಷ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.

ರಾಜೀನಾಮೆ ನೀಡಲ್ಲ: ಬಿಜೆಪಿ ಪ್ರತಿಭಟನೆಗೆ ಪ್ರತಿಕ್ರಿಯಿಸಿರುವ ಡಿಕೆ ಶಿವಕುಮಾರ್ ಪ್ರತಿಭಟನೆ, ಹೋರಾಟ ಮಾಡುವವರಿಗೆ ಶುಭವಾಗಲಿ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡಲು ಎಲ್ಲರಿಗೂ ಹಕ್ಕಿದೆ. ನಾನು ಮಾತ್ರ ರಾಜೀನಾಮೆ ನೀಡುವ ಮಾತೇ ಇಲ್ಲ ಎಂದಿದ್ದಾರೆ. ಡಾ. ರಾಜ್ ಕುಮಾರ್ ಹೇಳಿದಂತೆ ಹೇಳುವುದಕ್ಕೂ ಕೇಳುವುದಕ್ಕೂ ಇದು ಸಮಯವಲ್ಲ. ಎಲ್ಲದಕ್ಕೂ ಕಾಲ ಬಂದಾಗ ಉತ್ತರ ಕೊಡಲಾಗುವುದು ಎಂದು ಪ್ರತಿಕ್ರಿಯಿಸಿದ್ದಾರೆ.

 

 

Comments

Leave a Reply

Your email address will not be published. Required fields are marked *