ಉಗ್ರರ ದಾಳಿಗೆ ಬಲಿಯಾದ ಪೊಲೀಸ್ ಮನೆಗೆ ಅಮಿತ್ ಶಾ ಭೇಟಿ

ಶ್ರೀನಗರ: ಜಮ್ಮ ಕಾಶ್ಮೀರದ ಅನಂತ್‍ನಾಗ್‍ನಲ್ಲಿ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಪೊಲೀಸ್ ಇನ್ಸ್ ಪೆಕ್ಟರ್ ಮನೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

ಜೂನ್ 21 ರಂದು ನಡೆದ ಭಯೋತ್ಪಾದಕ ದಾಳಿಯಲ್ಲಿ ಜಮ್ಮು ಕಾಶ್ಮೀರದ ಅನಂತ್‍ನಾಗ್ ಜಿಲ್ಲೆಯ ಇನ್ಸ್ ಪೆಕ್ಟರ್ ಅರ್ಷದ್ ಅಹ್ಮದ್ ಖಾನ್ ಎಂಬುವವರು ಮೃತಪಟ್ಟಿದ್ದರು. ಇಂದು ಗೃಹ ಮಂತ್ರಿಯಾದ ಮೇಲೆ ಮೊದಲ ಬಾರಿಗೆ ಜಮ್ಮು ಕಾಶ್ಮೀರಕ್ಕೆ ಭೇಡಿ ನೀಡಿದ ಅಮಿತ್ ಅಹ್ಮದ್ ಖಾನ್ ಕುಟುಂಬವನ್ನು ಬಾಲ್ ಗಾರ್ಡನ್ ಪ್ರದೇಶದಲ್ಲಿರುವ ಅವರ ಮನೆಗೆ ಹೋಗಿ ಭೇಟಿ ಮಾಡಿದ್ದಾರೆ.

37 ವರ್ಷದ ಅಹ್ಮದ್ ಖಾನ್ ಅವರಿಗೆ ನಾಲ್ಕು ಮತ್ತು ಒಂದು ವರ್ಷದ ಇಬ್ಬರು ಗಂಡು ಮಕ್ಕಳಿದ್ದಾರೆ. ಜೂನ್ 21 ರಂದು ಜೈಶ್-ಇ- ಮೊಹಮ್ಮದ್ ಸಂಘಟನೆಯ ಉಗ್ರರು ಗಸ್ತು ತಿರುಗುತ್ತಿದ್ದ ಭದ್ರತಾ ಪಡೆಗಳ ಮೇಲೆ ದಾಳಿಮಾಡಿದ್ದರು. ಈ ವೇಳೆ ಐವರು ಯೋಧರು ಮೃತ ಪಟ್ಟಿದ್ದರು. ಈ ದಾಳಿಯಲ್ಲಿ ಗಭೀರವಾಗಿ ಗಾಯಗೊಂಡಿದ್ದ ಅರ್ಷದ್ ಅಹ್ಮದ್ ಖಾನ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಏರ್ ಆಂಬುಲೆನ್ಸ್ ಮೂಲಕ ದೆಹಲಿ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು.

 

ಉಗ್ರರು ದಾಳಿ ತಿಳಿಯುತ್ತಿದ್ದಂತೆ ಅನಂತ್‍ನಾಗ್‍ನ ಸದ್ದಾರ್ ಪೊಲೀಸ್ ಠಾಣೆಯಲ್ಲಿ ಇದ್ದ ಖಾನ್ ತಕ್ಷಣ ತಮ್ಮ ವಾಹನದಲ್ಲಿ ಘಟನಾ ಸ್ಥಳವನ್ನು ತಲುಪಿದ್ದಾರೆ. ಅವರು ತಮ್ಮ ವಾಹನದಿಂದ ಕೆಳಗೆ ಇಳಿದ ತಕ್ಷಣ ಉಗ್ರರು ಗುಂಡಿನ ದಾಳಿ ಮಾಡಿದ್ದಾರೆ. ಈ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಖಾನ್ ಅವರು ದೆಹಲಿಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

Comments

Leave a Reply

Your email address will not be published. Required fields are marked *