ಬಾಂಡ್‌ ಬರುವ ಮೊದಲು ಚುನಾವಣೆಗೆ ಫಂಡಿಂಗ್‌ ಹೇಗೆ ನಡೆಯುತ್ತಿತ್ತು – ದೇಶದ ಜನತೆಗೆ ಅಮಿತ್‌ ಶಾ ಪ್ರಶ್ನೆ

– ಕಪ್ಪು ಹಣವನ್ನು ನಿರ್ಮೂಲನೆ ಮಾಡಲು ಯೋಜನೆ ಜಾರಿ
– ಕಂಪನಿ, ಪಕ್ಷದ ಬ್ಯಾಲೆನ್ಸ್‌ ಶೀಟ್‌ನಲ್ಲಿ ವಿವರ ಉಲ್ಲೇಖ
– ಯೋಜನೆ ರದ್ದುಗೊಂಡಿದ್ದರಿಂದ ಮತ್ತೆ ಕಪ್ಪು ಹಣ ಬರಲಿದೆ

ನವದೆಹಲಿ: ಕಪ್ಪು ಹಣವನ್ನು (Black Money) ನಿರ್ಮೂಲನೆ ಮಾಡಲು ಚುನಾವಣಾ ಬಾಂಡ್‌ (Electoral Bonds) ಯೋಜನೆಯನ್ನು ಸರ್ಕಾರ ಜಾರಿ ಮಾಡಿತ್ತು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಹೇಳಿದ್ದಾರೆ.

ಮಾಧ್ಯಮವೊಂದರ ಕಾರ್ಯಕ್ರಮದಲ್ಲಿ ಅವರು ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್ ಯೋಜನೆಯನ್ನು ರದ್ದುಗೊಳಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.

ಸುಪ್ರೀಂ ಕೋರ್ಟ್‌ನ ಆದೇಶದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಾನು ಬಯಸುವುದಿಲ್ಲ. ಆದರೆ ಚುನಾವಣಾ ಬಾಂಡ್‌ಗಳ ಯೋಜನೆ ಮತ್ತು ಕಪ್ಪುಹಣವನ್ನು ನಿರ್ಮೂಲನೆ ಮಾಡಲು  ಅದನ್ನು ಹೇಗೆ ಪರಿಚಯಿಸಲಾಗಿದೆ ಎಂಬುದರ ಕುರಿತು ಚರ್ಚಿಸಲು ನಾನು ಸಿದ್ಧ ಎಂದು ಅಮಿತ್ ಶಾ ಹೇಳಿದರು.

ದೇಶದ ಜನರಲ್ಲಿ ಒಂದು ಪ್ರಶ್ನೆ ಕೇಳಲು ಬಯಸುತ್ತೇನೆ. ಯೋಜನೆ ಜಾರಿಯಾಗುವ ಮೊದಲು ಚುನಾವಣೆಗೆ  ಫಂಡಿಂಗ್‌ ಹೇಗೆ ನಡೆಯುತ್ತಿತ್ತು?  ಪಕ್ಷಗಳಿಗೆ ನಗದು ಮೂಲಕ ದೇಣಿಗೆ ನೀಡಲಾಗುತ್ತಿತ್ತು. ಆದರೆ ಎಲ್ಲಿಯೂ ಯಾರು ಹಣ ನೀಡಿದ್ದಾರೆ ಎಂಬ ಮಾಹಿತಿ ಬರುತ್ತಿರಲಿಲ್ಲ. ಅದು ಕಪ್ಪು ಹಣ ಅಥವಾ ಬಿಳಿ ಹಣವೋ ಎಂದು ಕೇಳಿದರು. ಈ ಯೋಜನೆ ರದ್ದಾದರೆ ಮತ್ತೆ ಕಪ್ಪು ಹಣ ಬರಲಿದೆ ಎಂದು ಎಚ್ಚರಿಸಿದರು. ಇದನ್ನೂ ಓದಿ: ಧರ್ಮಯುದ್ಧದಲ್ಲಿ ನನ್ನನ್ನು ಗೆಲ್ಲಿಸಿ, ಸತ್ಯಕ್ಕೆ ಜಯಸಿಗಬೇಕು: ಡಾ.ಮಂಜುನಾಥ್ 

ಚುನಾವಣಾ ಬಂಡ್‌ ಯೋಜನೆ ಕಾರ್ಯಗತಗೊಂಡ ನಂತರ ಕಂಪನಿಗಳು ಅಥವಾ ವ್ಯಕ್ತಿಗಳು ಪಕ್ಷಗಳಿಗೆ ದೇಣಿಗೆಗಾಗಿ ಬಾಂಡ್ ಅನ್ನು ಖರೀದಿಸಲು ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಚೆಕ್ ಅನ್ನು ಸಲ್ಲಿಸಬೇಕಾಗಿತ್ತು. ಚುನಾವಣಾ ಬಾಂಡ್‌ಗಳ ಯೋಜನೆಯನ್ನು ಜಾರಿಗೊಳಿಸಿದ ನಂತರ ಗೌಪ್ಯತೆಗೆ ಅವಕಾಶವಿಲ್ಲ. ಪಕ್ಷಗಳು ಚುನಾವಣಾ ಬಾಂಡ್‌ ಮೂಲಕ ಪಡೆದ ಹಣದ ವಿವರವನ್ನು ಬಹಿರಂಗ ಪಡಿಸಬೇಕು ಮತ್ತು ಕಂಪನಿಗಳು ತಮ್ಮ ಬ್ಯಾಲೆನ್ಸ್‌ ಶೀಟ್‌ನಲ್ಲಿ ಎಷ್ಟು ಎಷ್ಟು ಬಾಂಡ್‌ ಪಡೆದಿದ್ದೇವೆ ಎಂಬುದನ್ನು ಉಲ್ಲೇಖಿಸುತ್ತವೆ. ಬಾಂಡ್‌ ಮೂಲಕ ಪಡೆದ ಹಣ ಕಪ್ಪು ಹಣ ಅಲ್ಲ ಎಂದು ಸರ್ಕಾರದ ಯೋಜನೆಯನ್ನು ಸಮರ್ಥಿಸಿಕೊಂಡರು.

ಬಿಜೆಪಿ ಅಧಿಕಾರದಲ್ಲಿರುವುದರಿಂದ ಚುನಾವಣಾ ಬಾಂಡ್‌ಗಳ ಯೋಜನೆಯಿಂದ ಲಾಭ ಪಡೆದಿದೆ ಎಂಬ ಗ್ರಹಿಕೆ ಇದೆ. ರಾಹುಲ್ ಗಾಂಧಿ ಕೂಡ ಇದು ವಿಶ್ವದ ಅತಿದೊಡ್ಡ ಸುಲಿಗೆ ದಂಧೆ ಎಂದು ಹೇಳಿದ್ದಾರೆ. ಅವರಿಗೆ ಈ ವಿಷಯಗಳನ್ನು ಯಾರು ಬರೆದುಕೊಡುತ್ತಾರೆ ಎನ್ನುವುದು ನನಗೆ ತಿಳಿದಿಲ್ಲ ಎಂದು ಹೇಳುವ ಮೂಲಕ ಅಮಿತ್ ಶಾ ಕುಟುಕಿದರು. ಇದನ್ನೂ ಓದಿ: ಬಿಜೆಪಿ ಅಭ್ಯರ್ಥಿ ಒಂದು ಮತ ಜಾಸ್ತಿ ಪಡೆದರೂ ರಾಜೀನಾಮೆ ಕೊಡ್ತೀರಾ? – ಪ್ರದೀಪ್‌ ಈಶ್ವರ್‌ಗೆ ಸುಧಾಕರ್‌ ಮರು ಸವಾಲ್‌!

ಬಿಜೆಪಿ 6000 ಕೋಟಿ ರೂ.ಗಳನ್ನು ಚುನಾವಣಾ ಬಾಂಡ್‌ ಮೂಲಕ ಪಡೆದುಕೊಂಡಿದೆ. ಎಲ್ಲಾ ಪಕ್ಷಗಳಿಗೆ ಒಟ್ಟು ಬಾಂಡ್‌ ಮೂಲಕ 20,000 ಕೋಟಿ ರೂ. ಬಂದಿದೆ. ಹಾಗಾದರೆ 14,000 ರೂ.ಗಳ ಬಾಂಡ್ ಎಲ್ಲಿ ಹೋಯಿತು ಎಂದು ಕೇಂದ್ರ ಗೃಹ ಸಚಿವರು ಪ್ರಶ್ನಿಸಿದರು.

 

ಚುನಾವಣಾ ಬಾಂಡ್ ಯೋಜನೆ ಮೂಲಕ ಬಿಜೆಪಿ ಪಡೆದಿರುವ ಮೊತ್ತದ ಬಗ್ಗೆ ಟೀಕಿಸುತ್ತಿರುವ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು ವಿರೋಧ ಪಕ್ಷಗಳು ಪಡೆದಿರುವ ಮೊತ್ತವು ಲೋಕಸಭೆಯಲ್ಲಿ ಅವರು ಹೊಂದಿರುವ ಸ್ಥಾನಗಳ ಸಂಖ್ಯೆ ಮತ್ತು ಪಕ್ಷದ ಸದಸ್ಯರ ಸಂಖ್ಯೆಗೆ ಅಸಮಾನವಾಗಿದೆ. 303 ಸಂಸದರನ್ನು ಹೊಂದಿರುವ ಬಿಜೆಪಿ 6,000 ಕೋಟಿ ರೂ.ಗಳನ್ನು ಚುನಾವಣಾ ಬಾಂಡ್‌ ಮೂಲಕ ಪಡೆದುಕೊಂಡಿದೆ. 242 ಸಂಸದರನ್ನು ಹೊಂದಿರುವ ವಿರೋಧ ಪಕ್ಷಗಳು 14,000 ಕೋಟಿ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಸ್ವೀಕರಿಸಿವೆ ಎಂದು ತಿಳಿಸಿದರು.

ಕಾಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ನಗದು ವಹಿವಾಟಿನ ಮೂಲಕ 1100 ದೇಣಿಗೆ ನೀಡಿದಾಗ ಪಕ್ಷಕ್ಕೆ 100 ರೂ. ಠೇವಣಿ ಇಡಲಾಗುತ್ತಿತ್ತು. 1000 ರೂ.ಗಳನ್ನು ತಮ್ಮ ಮನೆಯಲ್ಲಿ ಇಡುತ್ತಿದ್ದರು. ಕಾಂಗ್ರೆಸ್ ಇದನ್ನು ವರ್ಷಗಳಿಂದ ಮಾಡಿಕೊಂಡು ಬಂದಿತ್ತು ಕಿಡಿಕಾರಿದರು.