ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಸಚಿವ ಕಿಶನ್ ರೆಡ್ಡಿಗೆ ಶಾ ಕ್ಲಾಸ್

ನವದೆಹಲಿ: ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಗೃಹ ಸಚಿವ ಅಮಿತ್ ಶಾ ತಮ್ಮ ಇಲಾಖೆಯ ಸಹಾಯಕ ಸಚಿವ ಕಿಶನ್ ರೆಡ್ಡಿ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ್ದ ಕಿಶನ್ ರೆಡ್ಡಿ, ಬೆಂಗಳೂರು, ಭೋಪಾಲ್ ಅಥವಾ ದೇಶದ ಯಾವುದೇ ನಗರದಲ್ಲಿ ಭಯೋತ್ಪಾದಕ ಕೃತ್ಯ ನಡೆದರೂ ಅದರ ಬೇರುಗಳು ಹೈದರಾಬಾದ್‍ನಲ್ಲಿದೆ. ಹೈದರಾಬಾದ್‍ನಲ್ಲಿ ಪ್ರತಿ 2-3 ತಿಂಗಳುಗಳಿಗೊಮ್ಮೆ ಉಗ್ರರ ಬಂಧನವಾಗುತ್ತದೆ ಎಂದು ಹೇಳಿಕೆ ನೀಡಿದ್ದರು.

ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದ್ದಂತೆ ಅಮಿತ್ ಶಾ ಕಿಶನ್ ರೆಡ್ಡಿ ಅವರಿಗೆ ಕ್ಲಾಸ್ ತೆಗೆದುಕೊಂಡು, ಇನ್ನು ಮುಂದೆ ಈ ರೀತಿಯ ವಿವಾದಕ್ಕೆ ಕಾರಣವಾಗುವ ಹೇಳಿಕೆಯನ್ನು ನೀಡಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ.

ಶನಿವಾರ, ಸಂಸತ್ತಿನ ನಾರ್ತ್ ಬ್ಲಾಕ್‍ನಲ್ಲಿರುವ ಗೃಹ ಸಚಿವರ ಕಚೇರಿಯಲ್ಲಿ ಅಮಿತ್ ಶಾ ಅಧಿಕಾರ ಸ್ವೀಕರಿಸಿ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ನಂತರ ಅವರು, ಇಂದು ನಾನು ಗೃಹ ಇಲಾಖೆಯ ಉಸ್ತುವಾರಿಯನ್ನು ವಹಿಸಿಕೊಂಡಿದ್ದೇನೆ. ನನ್ನಲ್ಲಿ ನಂಬಿಕೆಯಿಟ್ಟು ನನಗೆ ಮುಖ್ಯವಾದ ಜವಾಬ್ದಾರಿ ನೀಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಕಿಶನ್ ರೆಡ್ಡಿಯವರ ಮಾತುಗಳಿಗೆ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ, ಸಚಿವರ ಮಾತು ಮುಸ್ಲಿಮರ ವಿರುದ್ಧ ಬಿಜೆಪಿ ಹೊಂದಿರುವ ದ್ವೇಷದ ಮನಸ್ಥಿತಿಯನ್ನು ಬಿಂಬಿಸುತ್ತದೆ. ಹೈದರಾಬಾದ್ ಉಗ್ರರ ಸ್ವರ್ಗ ಎಂದು ಗುಪ್ತಚರ, ರಾಷ್ಟ್ರೀಯ ತನಿಖಾ ದಳ ಸರ್ಕಾರಕ್ಕೆ ಲಿಖಿತ ರೂಪದಲ್ಲಿ ಸಲ್ಲಿಸಿದ್ಯಾ ಎಂದು ಪ್ರಶ್ನಿಸಿದ್ದಾರೆ.

Comments

Leave a Reply

Your email address will not be published. Required fields are marked *