ಲೋಕಸಭಾ ಆಯ್ತು, ವಿಧಾನಸಭಾ ಚುನಾವಣೆಯತ್ತ ಅಮಿತ್ ಶಾ ಕಣ್ಣು

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಬಿಜೆಪಿ ಈಗ ಮಹಾರಾಷ್ಟ್ರ, ಹರ್ಯಾಣ ಹಾಗೂ ಜಾರ್ಖಂಡ್ ಮೇಲೆ ಗಮನ ಕೇಂದ್ರಿಕರಿಸುತ್ತಿದೆ.

ಕೇಂದ್ರ ಗೃಹ ಸಚಿವ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇಂದು ದೆಹಲಿ ಬಿಜೆಪಿ ಕಚೇರಿಯಲ್ಲಿ ಮೂರೂ ರಾಜ್ಯಗಳ ನಾಯಕರ ಜೊತೆಗೆ ಸಭೆ ನಡೆಸಿದ್ದಾರೆ. ಈ ಸಭೆಗೆ ಹರ್ಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್‍ಲಾಲ್ ಸೇರಿದಂತೆ ಅನೇಕ ನಾಯಕರು ಹಾಜರಾಗಿದ್ದಾರೆ.

ಹರ್ಯಾಣ, ಮಹಾರಾಷ್ಟ್ರ ಹಾಗೂ ಜಾರ್ಖಂಡ್ ರಾಜ್ಯಗಳಲ್ಲಿ ಈಗಾಗಲೇ ಬಿಜೆಪಿ ಅಧಿಕಾರದಲ್ಲಿದೆ. ಈ ರಾಜ್ಯಗಳ ಚುನಾವಣೆ ಇದೇ ವರ್ಷ ನಡೆಯಲಿದೆ. ಹೀಗಾಗಿ ಅಮಿತ್ ಶಾ ಅವರು ಸ್ಥಳೀಯ ನಾಯಕರ ಜೊತೆಗೆ ವಿಶೇಷ ಸಭೆ ನಡೆಸಿದ್ದಾರೆ.

ಮಹಾರಾಷ್ಟ್ರ ವಿಧಾನಸಭೆಯ ಚುನಾವಣೆ 2014ರಲ್ಲಿ ನಡೆದಿತ್ತು. ಆಗ ಒಟ್ಟು 288 ಕ್ಷೇತ್ರಗಳ ಪೈಕಿ ಬಿಜೆಪಿ 125, ಶಿವಸೇನೆ 60 ಸ್ಥಾನ ಪಡೆದಿದ್ದವು. ಆದರೆ ಯಾವುದೇ ಪಕ್ಷಕ್ಕೂ ಬಹುಮತ ಸಿಗದ ಹಿನ್ನೆಲೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಿದ್ದ ಬಿಜೆಪಿ ಹಾಗೂ ಶಿವಸೇನೆ ಮತ್ತೆ ಒಂದಾಗಿ ಮೈತ್ರಿ ಸರ್ಕಾರ ರಚಿಸಿದ್ದವು. ಈ ಬಾರಿಯೂ ಮೈತ್ರಿ ಮುಂದವರಿಯಲಿದೆ ಎಂದು ಪಕ್ಷದ ಮೂಲಗಳಿಂದ ತಿಳಿದು ಬಂದಿದೆ.

2014ರಲ್ಲಿ ನಡೆದ ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 81 ಕ್ಷೇತ್ರಗಳ ಪೈಕಿ ಬಿಜೆಪಿ 47 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಈ ವೇಳೆ ಎಜೆಎಸ್‍ಯು ಬೆಂಬಲ ಪಡೆದು ಸರ್ಕಾರ ರಚಿಸಿತ್ತು.

ಜಾರ್ಖಂಡ್ ವಿಧಾನಸಭೆಗೆ 2014ರಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟು 90 ಸ್ಥಾನಗಳ ಪೈಕಿ ಬಿಜೆಪಿ 48 ಸಂಖ್ಯಾಬಲ ಪಡೆದು ಅಧಿಕಾರಕ್ಕೆ ಬಂದಿತ್ತು. ಈ ಬಾರಿಯೂ ಮೂರು ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವನ್ನು ಆಡಳಿತಕ್ಕೆ ತರುವ ನಿಟ್ಟಿನಲ್ಲಿ ಅಮಿತ್ ಶಾ ಮಾಸ್ಟರ್ ಪ್ಲಾನ್ ರೂಪಿಸುತ್ತಿದ್ದಾರೆ ಎನ್ನಲಾಗುತ್ತಿದೆ.

Comments

Leave a Reply

Your email address will not be published. Required fields are marked *