ಬಿಜೆಪಿ ಪಕ್ಷ ಪಶ್ಚಾತ್ತಾಪ ಯಾತ್ರೆ ಮಾಡಿದ್ರೆ ಜನರು ನೋಡಬಹುದು: ದಿನೇಶ್ ಗುಂಡೂರಾವ್

ಬೆಂಗಳೂರು: ಬಿಜೆಪಿಯವರು ಪರಿವರ್ತನಾ ಯಾತ್ರೆ ಬದಲು ಪಶ್ಚಾತ್ತಾಪ ಯಾತ್ರೆ ಮಾಡಿದರೆ ಜನರು ನೋಡಬಹುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಲೇವಡಿ ಮಾಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷವು ಆಯೋಜಿಸಿದ್ದ ಪರಿವರ್ತನಾ ಯಾತ್ರೆ ಸಮಾರಂಭವು ವಿಫಲವಾಗಿದ್ದು, ರಾಷ್ಟ್ರೀಯ ಪಕ್ಷವೊಂದರ ಮೊದಲ ಚುನಾವಣಾ ಪ್ರಚಾರ ಚಾಲನಾ ಸಭೆ ಈ ಮಟ್ಟದಲ್ಲಿ ಫ್ಲಾಪ್ ಆಗಿರಲಿಲ್ಲ. ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ಕಡಿಮೆ ಆಗಿರುವುದಕ್ಕೆ ರಾಜ್ಯದ ಪರಿವರ್ತನಾ ಯಾತ್ರೆ ಪ್ರಮುಖ ಉದಾಹರಣೆ. ಬಿಜೆಪಿ ನಾಯಕರ ಪರಿವರ್ತನಾ ಯಾತ್ರೆ ಮಾಡುವ ಬದಲು ಪಶ್ಚಾತ್ತಾಪ ಯಾತ್ರೆ ಮಾಡಿದರೆ ಜನ ಅವರ ಕಡೆ ನೋಡಬಹುದು ಎಂದು ವ್ಯಂಗ್ಯವಾಡಿದರು.

ರಾಜ್ಯ ಸರ್ಕಾರಕ್ಕೆ ಕನ್ನಡ ರಾಜ್ಯೋತ್ಸವ ನಡೆಸಲು ಆಸಕ್ತಿ ಇಲ್ಲ, ಟಿಪ್ಪು ಜಯಂತಿ ಆಚರಿಸಲು ಹೆಚ್ಚು ಉತ್ಸುಕವಾಗಿದೆ ಎನ್ನುವ ಅಮಿತ್ ಶಾ ಹೇಳಿಕೆ ಪ್ರತಿಕ್ರಿಯಿಸಿ, ಯಡಿಯೂರಪ್ಪ ಅವರು ಸೇರಿದಂತೆ ಬಿಜೆಪಿ ನಾಯಕರಿಗೆ ಕನ್ನಡದ ಮೇಲೆ ಪ್ರೀತಿ ಇದೆ ಅಥವಾ ಇಲ್ಲ ಅಂತ ನಾನು ಹೇಳಲ್ಲ. ಕನ್ನಡದ ಬಗ್ಗೆ ಪ್ರಶ್ನೆ ಮಾಡುವುದಕ್ಕೆ ಅಮಿತ್ ಶಾ ಯಾರು ಎಂದು ಗರಂ ಆಗಿ ಪ್ರಶ್ನಿಸಿದರು.

ಕೇಂದ್ರದಿಂದ ಅನುದಾನ ಪಡೆಯುವುದು ನಮ್ಮ ಹಕ್ಕು ಅದನ್ನು ಪಡೆಯುತ್ತಿದ್ದೇವೆ. ಈ ಕುರಿತು ಪ್ರಧಾನಿ ಅಥವಾ ಆರ್ಥಿಕ ಸಚಿವರು ಮಾಹಿತಿ ಕೇಳಲಿ. ಅಮಿತ್ ಶಾ ಅವರಿಗೆ ಸಂವಿಧಾನದ ಕುರಿತು ಅರಿವಿಲ್ಲ ಎಂದು ಕಿಡಿಕಾರಿದರು.

ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರವೇನು ಭಿಕ್ಷೆ ಕೊಡಬೇಕಿಲ್ಲ, ನಾವು ಭಿಕ್ಷುಕರಲ್ಲ. ಕೇಂದ್ರದ ಮುಂದೆ ನಾವು ಎಂದು ಕೈ ಚಾಚಿ ನಿಲ್ಲಬೇಕಿಲ್ಲ. ಕಳೆದ ಬಾರಿ ಬರ ಪರಿಹಾರ ಸಮಯದಲ್ಲಿ ಕೇಂದ್ರ ಸರ್ಕಾರವು ಮಹಾರಾಷ್ಟ್ರ ಹಾಗೂ ಗುಜರಾತ್ ಗಿಂತ ಕಡಿಮೆ ಅನುದಾನವನ್ನು ನೀಡಿದೆ. ಕೇಂದ್ರದಿಂದ ಹಣ ನೀಡುವುದಿಲ್ಲ ಎಂದು ಹೇಳುವ ಅಧಿಕಾರ ಬಿಜೆಪಿ ನಾಯಕರಿಗಿಲ್ಲ ಎಂದರು.

ರೈಲ್ವೇ ಯೋಜನೆಗಳಿಗೆ ಶೇಕಡಾ 50 ರಷ್ಟು ಅನುದಾನ ಹಾಗೂ ಭೂಮಿ ರಾಜ್ಯ ಸರ್ಕಾರ ನೀಡುತ್ತದೆ. ಆದರೆ ಮೊನ್ನೆ ಪ್ರಧಾನಿ ಮೋದಿ ಕಲಬುರಗಿ- ಬೀದರ್ ರೈಲ್ವೇ ಯೋಜನೆ ಉದ್ಘಾಟನೆ ವೇಳೆ ಸಿಎಂ ಸಿದ್ದರಾಮಯ್ಯ ಅವರಿಗೆ ಸರಿಯಾಗಿ ಅಹ್ವಾನ ಸಹ ಕೊಟ್ಟಿರಲಿಲ್ಲ. ಮೋದಿ ಅವರ ಈ ನಡೆ ಬಿಜೆಪಿಯ ಸಂಸದೀಯ ತತ್ವಗಳಿಗೆ ವಿರುದ್ಧವಾಗಿದೆ ಎಂದು ಹೇಳಿದರು.

ಇನ್ನೂ ಅಮಿತ್ ಶಾ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಇಬ್ಬರಿಗೂ ಕೆಲವು ವಿಷಯಗಳಲ್ಲಿ ಸಾಮ್ಯತೆ ಇದೆ. ವಿಶೇಷವಾಗಿ ಇಬ್ಬರೂ ಜೈಲಿಗೆ ಹೋಗಿ ಬಂದವರು ಎಂದು ತಿಳಿಸಿದರು.

ಇದನ್ನು ಓದಿ : ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿದ ಎರಡೂವರೆ ಲಕ್ಷ ಕೋಟಿ ರೂ. ಅನುದಾನ ಏನಾಯ್ತು: ಸಿದ್ದರಾಮಯ್ಯಗೆ ಅಮಿತ್ ಶಾ ಪ್ರಶ್ನೆ

 

 

 

Comments

Leave a Reply

Your email address will not be published. Required fields are marked *