ಹಿಂಸಾರೂಪಕ್ಕೆ ತಿರುಗಿದ ಶಬರಿಮಲೆ ಪ್ರತಿಭಟನೆ: ಗುಂಡಾಗಿರಿ ಪ್ರದರ್ಶಿಸಿದ ಪೊಲೀಸರು!

ತಿರುವನಂತಪುರಂ: ಪುರಾತನ ಧಾರ್ಮಿಕ ಕ್ಷೇತ್ರ ಶಬರಿಮಲೆಗೆ ಮಹಿಳೆಯ ಪ್ರವೇಶ ವಿಚಾರವಾಗಿ ಶಬರಿಮಲದ ನಿಳಕ್ಕಲ್ ಬಳಿ ನಡೆಯುತ್ತಿದ್ದ ಪ್ರತಿಭಟನೆ ಉಗ್ರ ರೂಪ ಪಡೆದುಕೊಂಡಿದೆ.

ಹೌದು, ಸುಪ್ರೀಂ ಕೋರ್ಟ್ ತೀರ್ಪು ಬೆನ್ನಲ್ಲೇ ಮಹಿಳೆಯರು ಇಂದು ಶಬರಿಮಲೆಯ ಪ್ರವೇಶಕ್ಕೆ ಮುಂದಾಗಿದ್ದರು. ಆದರೆ ಮಹಿಳೆಯರಿಗೆ ಮಾತ್ರ ಯಾವುದೇ ಕಾರಣಕ್ಕೂ ಮಣಿಕಂಠನ ದರ್ಶನಕ್ಕೆ ಅವಕಾಶ ನೀಡುವುದಿಲ್ಲವೆಂದು ಪ್ರಭಾವಿ ನಾಯರ್ ಸಮಾಜ, ಹಿಂದೂಪರ ಸಂಘಟನೆಗಳು, ಬಿಜೆಪಿ ಹಾಗೂ ಕಾಂಗ್ರೆಸ್ ನಡೆಸಿದ ಪ್ರತಿಭಟನೆ ಹಿಂಸಾರೂಪ ಪಡೆದಿದೆ.

ಶಬರಿಗಿರಿ ತಲುಪುವ ಮುಖ್ಯ ದ್ವಾರವಾದ ನಿಳಕ್ಕಲ್‍ನಲ್ಲಿ ಬೆಳಗ್ಗೆಯಿಂದಲೂ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಲ್ಲಿಂದ 20 ಕಿ.ಮೀ. ಭಕ್ತರು ಕಾಲು ದಾರಿಯಲ್ಲೇ ಅಯ್ಯಪ್ಪನ ದೇಗುಲ ತಲುಪಬೇಕಿದೆ. ಇದರ ಜೊತೆ ಅಯ್ಯಪ್ಪನ ದೇಗುಲದ ದ್ವಾರ ತೆರೆಯಲು ಸಮಯ ಸಮೀಸುತ್ತಿದ್ದಂತೆಯೇ ಉದ್ರಿಕ್ತರು ಪ್ರತಿಭಟನೆಯನ್ನು ಹಿಂಸಾರೂಪಕ್ಕೆ ಬದಲಾಯಿಸಿದರು. ಅಯ್ಯಪ್ಪನ ದರ್ಶನಕ್ಕೆ ಆಗಮಿಸುತ್ತಿದ್ದ ಮಹಿಳೆಯರು ಹಾಗೂ ಹೆಣ್ಣು ಮಕ್ಕಳನ್ನು ಮಾರ್ಗಮಧ್ಯದಲ್ಲೇ ತಡೆದರು.

ಇಂದು ಏನಾಯ್ತು?
ಇಂದು ಬೆಳಗ್ಗೆ ಸ್ವತಃ ಮಹಿಳೆಯರಿಂದಲೇ ನಿಳಕ್ಕಲ್ ಹಾಗೂ ಪಂಪಾದಲ್ಲಿ ಪ್ರತಿಭಟನೆ ನಡೆಯಿತು. ಅಯ್ಯಪ್ಪನ ಸನ್ನಿಧಿಗೆ ಎಲ್ಲಾ ವಯಸ್ಸಿನ ಮಹಿಳೆಯರ ಪ್ರವೇಶಕ್ಕೆ ಸುಪ್ರೀಂಕೋರ್ಟ್ ಅವಕಾಶ ನೀಡಿದ್ದು ಸರಿಯಲ್ಲ ಎಂದು ಮಹಿಳೆಯರು ಆಕ್ರೋಶ ಹೊರಹಾಕಿದರು. ಅಯ್ಯಪ್ಪನ ದರ್ಶನ ಪಡೆಯಲು ಮಕ್ಕಳೊಂದಿಗೆ ತೆರಳಿದ್ದ ಮಹಿಳೆಗೆ ಪ್ರತಿಭಟನಾಕಾರರು ದಾರಿಯಲ್ಲೇ ದಿಗ್ಬಂಧನ ಹಾಕಿದರು. ಇದರಿಂದ ಆತಂಕಕ್ಕೀಡಾದ ಮಹಿಳೆ ಮಗುವಿನೊಂದಿಗೆ ಹಿಂತಿರುಗಿದರು.

ಮಧ್ಯಾಹ್ನ 2 ಗಂಟೆ ವೇಳೆಗೆ ಪ್ರತಿಭಟನೆ ಹಿಂಸಾರೂಪ ಪಡೀತು. ವರದಿಗೆ ತೆರಳಿದ್ದ ಇಂಗ್ಲೀಷ್ ನ್ಯೂಸ್ ಚಾನೆಲ್‍ಗಳ ವರದಿಗಾರ್ತಿಯರ ಮೇಲೆ ಹಲ್ಲೆ ನಡೆಸಲಾಯಿತು. ಪತ್ರಕರ್ತೆಯರು ಕಾರು ಹಾಗೂ ಪೊಲೀಸ್ ವ್ಯಾನ್‍ನಲ್ಲಿ ಭದ್ರತೆ ಪಡೆದರೂ, ಉದ್ರಿಕ್ತರು ದಾಳಿ ನಡೆಸಿದರು. ಮಧ್ಯಾಹ್ನ 3.45ರ ವೇಳೆಗೆ ಅಯ್ಯಪ್ಪನ ಸನ್ನಿಧಾನ ರಣಾಂಗಣವಾಗಿ ಮಾರ್ಪಟ್ಟಿತ್ತು. ಪೊಲೀಸರ ಮೇಲೆಯೇ ಪ್ರತಿಭಟನಾಕಾರರು ಕಲ್ಲುತೂರಿದರು. ಪರಿಸ್ಥಿತಿ ಮತ್ತಷ್ಟು ವಿಷಮಿಸಿ ಹಿಂಸಾಚಾರ ಭುಗಿಲೆದ್ದಿತ್ತು. ಬೆಳಗ್ಗಿನಿಂದಲೂ ಎಲ್ಲವನ್ನೂ ಸಮಚಿತ್ತದಿಂದಲೇ ನಿಭಾಯಿಸಿದ್ದ ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಲು ಲಾಠಿ ಬೀಸಿದರು.

ಪೊಲೀಸರ ಲಾಠಿ ಚಾರ್ಜ್ ನಿಂದ ಮತ್ತಷ್ಟು ರೊಚ್ಚಿಗೆದ್ದ ಪ್ರತಿಭಟನಾಕಾರರು ಬೈಕ್‍ವೊಂದನ್ನ ಜಖಂಗೊಳಿಸಿ, ಕೇರಳ ಸಾರಿಗೆ ಬಸ್ ಮೇಲೆ ಕಲ್ಲು ತೂರಿ ಗ್ಲಾಸ್‍ಗಳನ್ನ ಹೊಡೆದು ಹಾಕಿದರು. ಪೊಲೀಸರ ಸರ್ಪಗಾವಲನ್ನೂ ಲೆಕ್ಕಿಸದೇ, ಸುಪ್ರೀಂಕೋರ್ಟ್ ತೀರ್ಪಲ್ಲ. ಸಂಪ್ರದಾಯವೇ ಮುಖ್ಯ ಎಂದು ರೊಚ್ಚಿಗೆದ್ದರು. ಈ ಮಧ್ಯೆ ಸ್ವಾಮಿ ಅಯ್ಯಪ್ಪ ಶಬರಿಮಲೆ ಸುತ್ತಲಿನ ಬುಡಕಟ್ಟು ಜನರ ಆರಾಧ್ಯ ದೈವವಾಗಿದ್ದು, ಶತಮಾನಗಳಿಂದ ಆಚರಿಸಿಕೊಂಡು ಬಂದ ಸಂಪ್ರದಾಯಗಳನ್ನು ಸರ್ಕಾರ ನಾಶಮಾಡಲು ಹೊರಟಿದೆ ಎಂದು ಬುಡಕಟ್ಟು ಸಮುದಾಯದ ಮುಖಂಡರು ಸಹ ಕಿಡಿಕಾರಿದರು.

ಪೊಲೀಸರಿಂದ ಗುಂಡಾ ವರ್ತನೆ:
ಸಂಜೆ ವೇಳೆಗೆ ಪ್ರತಿಭಟನೆ ಹಿಂಸಾರೂಪ ಪಡೆದ ಬೆನ್ನಲ್ಲೇ, ಪೊಲೀಸರು ಲಾಠಿ ಚಾರ್ಜ್ ಮಾಡುವ ಮೂಲಕ ಪ್ರತಿಭಟನೆಯನ್ನು ಹತ್ತಿಕ್ಕಲು ಯತ್ನಿಸಿದ್ದರು. ಇದಾದ ಬಳಿಕ ಪಂಪಾದ ಬಳಿ ಪ್ರತಿಭಟನಾಕಾರರು ನಿಲ್ಲಿಸಿದ್ದ ವಾಹನಗಳ ಮೇಲೆ ಪೊಲೀಸರು ಗುಂಡಾ ವರ್ತನೆ ತೋರಿಸಿದ್ದಾರೆ. ಪೊಲೀಸರು ಸ್ಥಳದಲ್ಲಿ ನಿಲ್ಲಿಸಿದ್ದ ಬೈಕುಗಳನ್ನು ಜಂಖಗೊಳಿಸಿದ್ದಾರೆ. ಅಲ್ಲದೇ ಅನೇಕ ವಾಹನಗಳನ್ನು ಮನಸೋ ಇಚ್ಛೆ ನಾಶಮಾಡಿದ್ದಾರೆ. ಪೊಲೀಸರ ವರ್ತನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ, ಪ್ರತಿಭಟನೆ ಮತ್ತಷ್ಟು ಕಾವು ಪಡೆದುಕೊಂಡಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *