ಸುರಂಗದೊಳಗೆ ಅಳುತ್ತಾ ಓಡಿ ಸತ್ತ ಬಾಗ್ದಾದಿ: ನರಹಂತಕನ ಸಾವಿನ ರಹಸ್ಯ

ವಾಷಿಂಗ್ಟನ್: ಇಸ್ಲಾಮಿಕ್ ಸ್ಟೇಟ್ ಅಫ್ ಇರಾಕ್ ಆಂಡ್ ಸಿರಿಯಾ (ಐಸಿಸ್) ಉಗ್ರ ಸಂಘಟನೆಯ ಮುಖ್ಯಸ್ಥ ಅಬು ಬಕರ್ ಅಲ್ ಬಾಗ್ದಾದಿ ತನ್ನ ಪ್ರಾಣ ಉಳಿಸಿಕೊಳ್ಳಲು ಸುರಂಗದೊಳಗೆ ಅಳುತ್ತಾ ತನ್ನ ಮೂರು ಮಕ್ಕಳೊಂದಿಗೆ ಓಡಿ ಹೋಗಿ ಸಾವನ್ನಪ್ಪಿದ್ದಾನೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಅಮೆರಿಕ ಸೇನಾ ದಾಳಿಗೆ ಹೆದರಿ ಅಲ್ ಬಾಗ್ದಾದಿ ಅತ್ಮಾಹುತಿ ಬಾಂಬ್ ದಾಳಿ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಭಾನುವಾರ ಸುದ್ದಿಯಾಗಿತ್ತು. ಆದರೆ ಅಮೆರಿಕಾ ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿದ ಕಾರಣ ಸುದ್ದಿ ಖಚಿತವಾಗಿರಲಿಲ್ಲ. ಆದರೆ ಟ್ರಂಪ್ ತುಂಬಾ ದೊಡ್ಡದಾದ ಒಂದು ಕೆಲಸ ಈಗ ತಾನೇ ಆಗಿದೆ ಎಂದು ಟ್ವೀಟ್ ಮಾಡಿ ಕುತೂಹಲ ಹೆಚ್ಚಿಸಿದ್ದರು.

ಈಗ ಈ ವಿಚಾರದ ಬಗ್ಗೆ ಶ್ವೇತಭವನದಲ್ಲಿ ಮಾತನಾಡಿರುವ ಟ್ರಂಪ್, ಪ್ರಪಂಚವನ್ನು ಬೆಚ್ಚಿ ಬೀಳಿಸಿದ್ದ ಉಗ್ರ ನಾಯಕ ಅಬು ಬಕರ್ ಅಲ್ ಬಾಗ್ದಾದಿ ಸಾವನ್ನಪ್ಪಿದ್ದಾನೆ ಎಂದು ಹೇಳಿದ್ದಾರೆ. ಈ ವಿಚಾರದ ಬಗ್ಗೆ ಮಾತನಾಡಿರುವ ಟ್ರಂಪ್, ಅಲ್ ಬಾಗ್ದಾದಿ ಮತ್ತೆ ಯಾವುದೇ ಮಹಿಳೆ, ಮಕ್ಕಳನ್ನು ಕೊಲ್ಲಲು ಆಗುವುದಿಲ್ಲ. ಅವನು ನಾಯಿಯಂತೆ ಸತ್ತನು. ಹೇಡಿಯಂತೆ ಸಾವನ್ನಪ್ಪಿದ್ದಾನೆ. ಈಗ ಪ್ರಪಂಚ ಇನ್ನೂ ಸುರಕ್ಷಿತವಾಗಿದೆ ಎಂದು ಹೇಳಿದರು.

ಬಾಗ್ದಾದಿಯನ್ನು ಕೊಲ್ಲಲು ವರ್ಷಗಳಿಂದ ಕಾದು ಕುಳಿತಿದ್ದ ಅಮೆರಿಕ ವಿಶೇಷ ಸೇನಾ ಪಡೆ, ಆತ ವಾಯುವ್ಯ ಸಿರಿಯಾ ಪ್ರದೇಶದಲ್ಲಿ ಇದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಹೆಲಿಕಾಪ್ಟರ್ ಮೂಲಕ ದಾಳಿ ಮಾಡಿವೆ. ಸುಮಾರು ಒಂದು ಗಂಟೆಗೂ ಅಧಿಕ ಕಾಲ ನಡೆದ ಹೆಲಿಕಾಪ್ಟರ್ ದಾಳಿಯಲ್ಲಿ ಬಾಗ್ದಾದಿಯ ಉಗ್ರರು ಸಾವನ್ನಪ್ಪಿದ್ದಾರೆ. ಇದರಿಂದ ಹೆದರಿದ ಬಾಗ್ದಾದಿ ಸುರಂಗದ ಮೂಲಕ ಓಡಲು ಶುರು ಮಾಡಿದ್ದಾನೆ.

ಅಮೆರಿಕ ಸೇನೆಯ ದಾಳಿಗೆ ಹೆದರಿದ ಅಲ್ ಬಾಗ್ದಾದಿ ತಪ್ಪಿಸಿಕೊಳ್ಳಲು ಸುರಂಗದಲ್ಲಿ ಅಳುತ್ತಾ ಕಿರುಚುತ್ತಾ ತನ್ನ ಮೂರು ಮಕ್ಕಳೊಂದಿಗೆ ಹೋಗುತ್ತಿದ್ದನು. ನಮ್ಮ ಶ್ವಾನ ದಳ ಅವನನ್ನು ಬೆನ್ನಟ್ಟಿದವು. ಕೊನೆಗೆ ಸುರಂಗ ಕೊನೆಯಾಗಿತು. ಇದರಿಂದ ಬಂಧನ ಭೀತಿಯಲ್ಲಿ ಅಲ್ ಬಾಗ್ದಾದಿ ತನ್ನ ಮೂರು ಜನ ಮಕ್ಕಳೊಂದಿಗೆ ಆತ್ಮಾಹುತಿ ಬಾಂಬ್ ಸಿಡಿಸಿಕೊಂಡು ಹೇಡಿಯಂತೆ ಸಾವನ್ನಪ್ಪಿದ್ದಾನೆ ಎಂದು ಟ್ರಂಪ್ ಶ್ವೇತ ಭವನದಲ್ಲಿ ಹೇಳಿದ್ದಾರೆ.

ಬಾಂಬ್ ಸಿಡಿದ ವೇಗಕ್ಕೆ ಅವನ ಮೂರು ಮಕ್ಕಳು ಸೇರಿ ಆತನ ದೇಹವು ಛಿಧ್ರವಾದ ಕಾರಣ ಅವನ ಮೃತದೇಹವು ನಮಗೆ ಸಿಗಲಿಲ್ಲ. ಆದರೆ ನಾವು ಸತ್ತಿರುವುದು ಬಾಗ್ದಾದಿ ಎಂದು ತಿಳಿದುಕೊಳ್ಳಲು ಅವನ ದೇಹದ ಭಾಗವನ್ನು ಡಿಎನ್‍ಎ ಪರೀಕ್ಷೆ ಮಾಡಿಸಿದ್ದೇವೆ. ಅದರಲ್ಲಿ ಈ ದೇಹ ಬಾಗ್ದಾದಿದೆ ಎಂದು ಖಚಿತವಾಗಿದೆ ಎಂದು ಟ್ರಂಪ್ ಹೇಳಿದ್ದಾರೆ.

48 ವರ್ಷದ ಅಬು ಬಕರ್ ಅಲ್ ಬಾಗ್ದಾದಿ ಇರಾಕ್ ನಿವಾಸಿಯಾಗಿದ್ದು, ತನ್ನದೆಯಾದ ಉಗ್ರ ಸಂಘಟನೆಯನ್ನು ಕಟ್ಟಿಕೊಂಡು ಹಿಂಸಾತ್ಮಕ ಭಯೋತ್ಪಾದನೆಯನ್ನು ಆರಂಭ ಮಾಡಿದ್ದ. ಈತ 2014 ರಲ್ಲಿ ಸಿರಿಯಾ ಮತ್ತು ಇರಾಕ್‍ನಲ್ಲಿ ಒಂದು ಪ್ರದೇಶವನ್ನು ಆಕ್ರಮಣ ಮಾಡಿಕೊಂಡು ಅಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಆರಂಭಿಸಿ ಸಾವಿರಾರು ಜನರ ಸಾವಿಗೆ ಕಾರಣನಾಗಿದ್ದ. ಇದರ ಜೊತೆಗೆ ಹಲವರ ಶಿರಚ್ಛೇದನ ಮಾಡಿದ್ದನು.

Comments

Leave a Reply

Your email address will not be published. Required fields are marked *