70 ನಿಮಿಷದಲ್ಲಿ 90 ಕಿ.ಮೀ ಸಂಚರಿಸಿ 3ರ ಬಾಲಕನ ಪ್ರಾಣ ಉಳಿಸಿದ ಯುವಕ

ಚೆನ್ನೈ: ತಿರುಪುರ್ ಮೂಲಕದ ಅಂಬುಲೆನ್ಸ್ ಚಾಲಕರೊಬ್ಬರು 70 ನಿಮಿಷದಲ್ಲಿ 90 ಕಿ.ಮೀ ಸಂಚರಿಸಿ 3 ವರ್ಷದ ಬಾಲಕನ ಪ್ರಾಣ ಉಳಿಸಿದ್ದಾರೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಇವರಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

21 ವರ್ಷದ ಅಂಬುಲೆನ್ಸ್ ಚಾಲಕ ಆಕಾಶ್ ಜ್ವರದಿಂದ ಬಳಲುತ್ತಿದ್ದ ಬಾಲಕ ಸಂತೋಷ್‍ನನ್ನು ಗುರುವಾರ ರಾತ್ರಿ ವೆಲ್ಲಾಕೋಯಿಲ್‍ನಿಂದ ಕೊಯಮತ್ತೂರಿನ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೇವಲ 70 ನಿಮಿಷದಲ್ಲಿ ತಲುಪಿದ್ದಾರೆ. ಆಕಾಶ್ ಬಾಲಕನನ್ನು ಆಸ್ಪತ್ರೆಗೆ ತಲುಪಿಸಿದ ಬಳಿಕ ಅಂಬುಲೆನ್ಸ್ ಮುಂದೆ ನಿಂತಿರುವ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋವನ್ನು ಅವರು ಪೋಸ್ಟ್ ಮಾಡಿದ ತಕ್ಷಣ ಸಾಕಷ್ಟು ವೈರಲ್ ಆಗಿದೆ.

ವರದಿಗಳ ಪ್ರಕಾರ, ಸಂತೋಷ್ ತೀವ್ರ ಜ್ವರದಿಂದ ಬಳಲುತ್ತಿದ್ದು, ಗುರುವಾರ ಆತನ ಪೋಷಕರು ಹತ್ತಿರದಲ್ಲಿದ್ದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ವೈದ್ಯರು ಸಂತೋಷ್‍ನನ್ನು ಕೊಯಮತ್ತೂರಿನ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲು ಸಲಹೆ ನೀಡಿದ್ದರು. ಅಲ್ಲದೆ ಸಂತೋಷ್‍ನನ್ನು ಆಸ್ಪತ್ರೆಗೆ ಸಾಗಿಸುವ ಕೆಲಸವನ್ನು ಅಂಬುಲೆನ್ಸ್ ಚಾಲಕ ಆಕಾಶ್ ಅವರಿಗೆ ವಹಿಸಲಾಗಿತ್ತು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಆಕಾಶ್, ವೈದ್ಯರು ಆದಷ್ಟು ಬೇಗ ಕೊಯಮತ್ತೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗು ಎಂದು ಸೂಚಿಸಿದ್ದರು. ನಾನು ಸಂಜೆ ಸುಮಾರು 7 ಗಂಟೆಗೆ ವೆಲ್ಲಾಕೋಯಿಲ್ ಹೊರಟ್ಟಿದ್ದು, 8.10ಕ್ಕೆ ಕೊಯಮತ್ತೂರಿನ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ತಲುಪಿದೆ. ಇದು 90 ಕಿ.ಮೀ ಪ್ರಯಾಣವಾಗಿದ್ದು, ಸಂತೋಷ್‍ನನ್ನು ಮಕ್ಕಳ ವಾರ್ಡ್‍ಗೆ ದಾಖಲಿಸಲಾಯಿತು. ಸಂತೋಷ್ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಹೇಳಿದ್ದಾರೆ.

ನಾನು 10ನೇ ತರಗತಿ ಡ್ರಾಪೌಟ್ ಆಗಿದ್ದು, ಇತ್ತೀಚೆಗೆ ಸ್ವಂತ ಅಂಬುಲೆನ್ಸ್ ಖರೀದಿಸಿದೆ. ಮುಂದಿನ ದಿನಗಳಲ್ಲಿ ಮತ್ತೊಂದು ಅಂಬುಲೆನ್ಸ್ ಖರೀದಿಸುವ ಮೂಲಕ ನನ್ನ ಬುಸಿನೆಸ್ ವಿಸ್ತರಿಸಲು ನಿರ್ಧರಿಸಿದ್ದೇನೆ. ರೋಗಿಗಳು ಹಾಗೂ ಆಸ್ಪತ್ರೆಗಳು ಬೇಡಿಕೆ ಇಟ್ಟಾಗ ನಾನು ಗಡಿಯನ್ನು ಮೀರಿ ಕೆಲಸ ಮಾಡುತ್ತೇನೆ ಎಂದು ಆಕಾಶ್ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *