ಅಮರಾವತಿಗೆ ಅಂಬರೀಷ್ ಮಂಗಳಾರತಿ!

ಬೆಂಗಳೂರು: ಮಂಡ್ಯ ಟಿಕೆಟ್ ವಿಚಾರದಲ್ಲಿ ರೆಬೆಲ್ ಸ್ಟಾರ್ ಅಂಬರೀಷ್ ಸಸ್ಪೆನ್ಸ್ ಇಂದು ಕೂಡಾ ಮುಂದುವರೆದಿದೆ. ಇದೇ ವೇಳೆ ತಮ್ಮ ಆಪ್ತ ಅಮರಾವತಿ ಚಂದ್ರಶೇಖರ್ ವಿರುದ್ಧ ಅಂಬಿ ಫುಲ್ ಗರಂ ಆಗಿದ್ದಾರೆ. ಎಲ್ಲಾ ಗೊಂದಲಗಳಿಗೆ ತೆರೆ ಎಳೆಯಲು ಅಂಬರೀಷ್ ಮಂಗಳವಾರ ಬೆಳಗ್ಗೆ 10.30ಕ್ಕೆ ಸುದ್ದಿಗೋಷ್ಠಿ ಕರೆದಿದ್ದಾರೆ. ಗಾಲ್ಫ್ ಕೋರ್ಸ್ ರಸ್ತೆಯಲ್ಲಿರುವ ನಿವಾಸದಲ್ಲಿ ಅಂಬರೀಷ್ ತಮ್ಮ ಮುಂದಿನ ರಾಜಕೀಯ ನಿಲುವಿನ ಬಗ್ಗೆ ಸ್ಪಷ್ಟನೆ ನೀಡಲಿದ್ದಾರೆ ಎನ್ನಲಾಗಿದೆ.

ಇಂದೇನಾಯ್ತು?: ಬೆಳಗ್ಗೆಯೇ ಅಂಬರೀಷ್ ಮನವೊಲಿಕೆಗೆ ಬೆಂಬಲಿಗರು ಮಂಡ್ಯದಿಂದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿರುವ ನಿವಾಸಕ್ಕೆ ಆಗಮಿಸಿದರು. ಅದರಲ್ಲೂ ಅಮರಾವತಿ ಚಂದ್ರಶೇಖರ್ ಮಂಡ್ಯ ಟಿಕೆಟ್ ನನಗೇ ಕೊಡಿಸಿ ಎಂದು ಅಂಬರೀಷ್ ಗೆ ದುಂಬಾಲು ಬಿದ್ದಿದ್ದರು. ನಿನಗೆ ಟಿಕೆಟ್ ಕೊಡಿಸೋಕೆ ನಾನ್ಯಾರು ಎಂದಿರುವ ಅಂಬಿ, ಅಮರಾವತಿ ಮನವಿಯನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಇಲ್ಲಿಯವರೆಗೆ ಯಾರ ಪರವೂ ಬ್ಯಾಟ್ ಬೀಸದ ಅಂಬರೀಷ್, ನಾಳೆ ಬೆಳಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವುದಾಗಿ ತಮ್ಮ ಬೆಂಬಲಿಗರ ಮೂಲಕ ಮಾಹಿತಿ ನೀಡಿದ್ದಾರೆ. ಯಾರನ್ನು ನಿಲ್ಲಿಸಬೇಕೆಂದು ಹೈಕಮಾಂಡ್ ನಿರ್ಧರಿಸುತ್ತೆ. ಇಂತವರಿಗೇ ಕೊಡಿ ಅಂತ ನಾನ್ಯಾಕೆ ಹೇಳಲಿ ಎಂದು ಅಂಬರೀಷ್ ಆಪ್ತರಲ್ಲಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

ನಾನ್ಯಾವಾಗ ಹೇಳ್ದೆ?: ಅಂಬಿಯನ್ನು ಭೇಟಿಯಾದ ಅಮರಾವತಿ ಚಂದ್ರಶೇಖರ್, ಅಣ್ಣ ನಿನಗಾಗಿ ಕ್ಷೇತ್ರದಲ್ಲಿ ಸಾಕಷ್ಟು ಕಷ್ಟಪಟ್ಟಿದ್ದೇವೆ. ನೀನೇ ಬಂದು ಸ್ಪರ್ಧೆ ಮಾಡು, ಇಲ್ಲಾ ನಮ್ಮಲ್ಲಿ ಯಾರ ಹೆಸರು ಹೇಳ್ತೀಯೋ ಅವರು ಸ್ಪರ್ಧೆ ಮಾಡ್ತಾರೆ. ನಾನು ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದ್ದಾರೆ.

ಇದಕ್ಕೆ ಅಂಬರೀಷ್, ನಾನು ಯಾರಿಗೂ ಹೇಳಲ್ಲ. ಊರು ತುಂಬ ಅಂಬರೀಶ್ ನನ್ನನ್ನು ಎಲೆಕ್ಷನ್ ಗೆ ನಿಲ್ಲೋಕೆ ಹೇಳಿದ್ದಾರೆ ಅಂತ ಹೇಳಿಕೊಂಡು ಬಂದಿದೀಯಾ. ಬೆಳಗ್ಗೆ ಕೊರಟಗೆರೆಗೆ ಹೋಗಿ ಪರಮೇಶ್ವರ್ ಹತ್ರ ಅಣ್ಣ ಹೇಳಿದ್ದಾರೆ ನಾನೇ ನಿಲ್ತೀನಿ ಅಂತ ಟಿಕೆಟ್ ಕೇಳಿದ್ದೀಯಾ. ಡಿ.ಕೆ.ಶಿವಕುಮಾರ್ ಬಳಿ ಹೋಗಿ ಅಣ್ಣ ನನಗೆ ಸ್ಪರ್ಧೆ ಮಾಡೋಕೆ ಹೇಳಿದ್ದಾರೆ ಎಂದು ಟಿಕೆಟ್ ಕೊಡಿಸಿ ಅಂದಿದ್ದೀಯಾ. ನಾನು ಯಾವಾಗ ನಿನಗೆ ಚುನಾವಣೆಗೆ ನಿಲ್ಲೋಕೆ ಹೇಳಿದ್ದೀನಿ, ಹೋಗು ಹೋಗು ಅಂತ ಹಿಗ್ಗಾ ಮುಗ್ಗಾ ಬೈದಿದ್ದಾರೆ. ಹೀಗಾಗಿ ಅಂಬಿ ಮನೆಯಿಂದ ಹೊರಬಂದ ಅಮರಾವತಿ ಚಂದ್ರಶೇಖರ್, ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

Comments

Leave a Reply

Your email address will not be published. Required fields are marked *