ಅಮರನಾಥ ಯಾತ್ರೆ – ಕೇಂದ್ರ ಗೃಹ ಇಲಾಖೆಯಿಂದ ಭದ್ರತಾ ಪರಿಶೀಲನೆ

ನವದೆಹಲಿ: ಜೂನ್ 30 ರಿಂದ ಆರಂಭವಾಗಲಿರುವ ಅಮರನಾಥ ಯಾತ್ರೆಯ ಭದ್ರತೆಯ ಬಗ್ಗೆ ಕೇಂದ್ರ ಗೃಹ ಇಲಾಖೆ ಪರಿಶೀಲನಾ ಸಭೆ ನಡೆಸಿದೆ. ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ನೇತೃತ್ವದಲ್ಲಿ ಸಭೆ ನಡೆದಿದ್ದು, ಎರಡು ವರ್ಷಗಳ ಬಳಿಕ ನಡೆಯುತ್ತಿರುವ ಯಾತ್ರೆಗೆ ನಿಯೋಜಿಸಿರುವ ಭದ್ರತೆಯ ಬಗ್ಗೆ ಅವರು ಮಾಹಿತಿ ಪಡೆದುಕೊಂಡರು.

ಕಾಶ್ಮೀರಕ್ಕೆ ಎರಡು ದಿನಗಳ ಪ್ರವಾಸ ತೆರಳಿದ್ದ ಗುಪ್ತಚರ ಇಲಾಖೆ ನಿರ್ದೇಶಕ ಅರವಿಂದ್ ಕುಮಾರ್ ಶುಕ್ರವಾರ ಅಜಯ್ ಕುಮಾರ್ ಭಲ್ಲಾ ಜೊತೆಗೆ ಮೊದಲ ಹಂತದ ಸಭೆ ನಡೆಸಿದರು. ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಎರಡನೇ ಸಭೆ ನಡೆಯಲಿದೆ ಎಂದು ಗೃಹ ಇಲಾಖೆಯ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಜೆ‌ಎನ್‌ಯು ಕ್ಯಾಂಪಸ್ ಬಳಿ ಕೇಸರಿ ಧ್ವಜ ಹಾರಿಸಿದ ಹಿಂದೂ ಸೇನೆ

ಅಮರನಾಥ ಯಾತ್ರೆಗೆ ಭದ್ರತೆ ಮುಖ್ಯವಾಗಿದ್ದು, ಭಯೋತ್ಪಾದನೆ ಚಟುವಟಿಕೆಗಳು ನಡೆಯುವ ಸಾಧ್ಯತೆಗಳಿರುತ್ತವೆ. ಈ ಹಿನ್ನೆಲೆ ಭದ್ರತಾ ಪಡೆಗಳ ನಿಯೋಜನೆ ಬಗ್ಗೆ ಇಂದಿನ ಸಭೆಯಲ್ಲಿ ಪರಿಶೀಲನೆ ನಡೆಸಲಾಯಿತು ಎನ್ನಲಾಗಿದ್ದು, ಸಭೆಯಲ್ಲಿ ಕಾಶ್ಮೀರ ಪೊಲೀಸ್ ಉನ್ನತ ಅಧಿಕಾರಿಗಳು ಭಾಗಿಯಾಗಿದ್ದರು.

ಕೊರೊನಾ ಕಾರಣದಿಂದ ಕಳೆದ ಎರಡು ವರ್ಷಗಳಿಂದ ರದ್ದು ಮಾಡಲಾಗಿದ್ದ ಅಮರನಾಥ ಯಾತ್ರೆಗೆ ಮತ್ತೆ ಚಾಲನೆ ನೀಡಿದ್ದು, ಏಪ್ರಿಲ್ 11 ರಿಂದ ಯಾತ್ರೆಗೆ ಭಕ್ತಾದಿಗಳ ನೋಂದಣಿ ಆರಂಭವಾಗಿದೆ. ಜೂನ್ 30 ರಿಂದ ಅಗಸ್ಟ್ 11 ವರೆಗೂ ಯಾತ್ರೆ ನಡೆಸಲು ತಿರ್ಮಾನಿಸಲಾಗಿದ್ದು, ಯಾತ್ರೆ ಕೈಗೊಳ್ಳುವ ಭಕ್ತಾದಿಗಳು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು ಎಂದು ತಿಳಿಸಲಾಗಿದೆ. ಇದನ್ನೂ ಓದಿ: ಒಮ್ಮೆ ನಡೆಸುವ ವ್ಯಭಿಚಾರಕ್ಕಾಗಿ ಮಹಿಳೆಯನ್ನು ಜೀವನಾಂಶದಿಂದ ಹೊರಗಿಡುವಂತಿಲ್ಲ: ಹೈಕೋರ್ಟ್

ಶ್ರೈನ್ ಬೋರ್ಡ್‌ನ ವೆಬ್‌ಸೈಟ್ ಅಥವಾ ಮೂಬೈಲ್ ಅಪ್ಲಿಕೇಶನ್ ಮೂಲಕ ನೋಂದಣಿ ಮಾಡಿಕೊಳ್ಳಲು ಪ್ರಕಟಣೆಯಲ್ಲಿ ತಿಳಿಸಲಾಗಿದ್ದು, ಈ ವರ್ಷ ಮೂರು ಲಕ್ಷ ಜನರು ಯಾತ್ರೆ ಮಾಡುವ ನಿರೀಕ್ಷೆಯಿದೆ. ಕಾಶ್ಮೀರದ ರಾಂಬನ್ ಜಿಲ್ಲೆಯಲ್ಲಿ 3,000 ಜನರು ಉಳಿದುಕೊಳ್ಳಲು ವ್ಯವಸ್ಥೆ ಇರುವ ಯಾತ್ರಿ ನಿವಾಸ ನಿರ್ಮಾಣ ಮಾಡಲಾಗಿದ್ದು ಅಲ್ಲಿ ಭಕ್ತಾಧಿಗಳು ತಂಗಲು ಅವಕಾಶ ಮಾಡಿಕೊಡಲಾಗಿದೆ.

Comments

Leave a Reply

Your email address will not be published. Required fields are marked *