ಬಿಜೆಪಿಯೊಂದಿಗೆ ಮೈತ್ರಿ – ಅಮರೀಂದರ್‌ ಸಿಂಗ್‌ ಅಧಿಕೃತ ಘೋಷಣೆ

ಚಂಡೀಗಢ: ಪಂಜಾಬ್‌ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವುದಾಗಿ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಇಂದು ಅಧಿಕೃತವಾಗಿ ಘೋಷಿಸಿದ್ದಾರೆ.

ದೆಹಲಿಯಲ್ಲಿ ಬಿಜೆಪಿ ನಾಯಕರೊಂದಿಗೆ ಸಭೆ ನಡೆಸಿದ ಬಳಿಕ ಅಮರೀಂದರ್‌ ಸಿಂಗ್‌ ಮೈತ್ರಿ ಕುರಿತು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಕೇಂದ್ರ ಸಚಿವ ಹಾಗೂ ಪಂಜಾಬ್‌ ಬಿಜೆಪಿ ಉಸ್ತುವಾರಿ ಗಜೇಂದ್ರ ಸಿಂಗ್‌ ಶೇಖಾವತ್‌ ಅವರನ್ನು ಆಲಂಗಿಸಿರುವ ಫೋಟೊವನ್ನು ಕ್ಯಾಪ್ಟನ್‌ ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಇದನ್ನೂ ಓದಿ: ಮೈತ್ರಿ ಬಗ್ಗೆ ಪ್ರಧಾನಿ ಮೋದಿ, ಅಮಿತ್‌ ಶಾ ಜೊತೆ ಮಾತನಾಡಿದ್ದೇನೆ: ಅಮರೀಂದರ್‌ ಸಿಂಗ್‌

ಬಿಜೆಪಿಯೊಂದಿಗೆ ಮೈತ್ರಿ ಆಗಿದೆ. ಚುನಾವಣೆಗಾಗಿ ಸೀಟುಗಳ ಹಂಚಿಕೆ ಸಂಬಂಧ ಮಾತುಕತೆ ನಡೆಯುತ್ತಿದೆ. ಯಾರು ಎಲ್ಲಿ ಸ್ಪರ್ಧಿಸುತ್ತಾರೆ ಎಂಬುದು ಮುಂದೆ ತಿಳಿಯಲಿದೆ. ಸೀಟು ಆಯ್ಕೆಯ ಮಾನದಂಡವು ಗೆಲುವಿಗೆ ಪೂರಕವಾಗಿರಲಿದೆ ಎಂದು ಅಮರೀಂದರ್‌ ತಿಳಿಸಿದ್ದಾರೆ.

ಮೈತ್ರಿ ಆಗಿರುವುದರಿಂದ ಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆಂಬ 101 ಪರ್ಸೆಂಟ್‌ ಭರವಸೆ ಇದೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅಮರೀಂದರ್‌ ಹೊಸ ಪಕ್ಷ ಸ್ಥಾಪನೆ – ರೈತರ ಸಮಸ್ಯೆ ಪರಿಹಾರವಾದರೆ ಬಿಜೆಪಿ ಜೊತೆ ಮೈತ್ರಿ

ಪಂಜಾಬ್‌ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ನಂತರ ಕಾಂಗ್ರೆಸ್‌ ತೊರೆದಿದ್ದ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಅವರು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಸುಳಿವು ನೀಡಿದ್ದರು. ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಹಿಂಪಡೆದರೆ ಪಂಜಾಬ್‌ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲಾಗುವುದು ಎಂದು ಸಿಂಗ್‌ ಹೇಳಿದ್ದರು. ಅಂತೆಯೇ ಈಗ ಬಿಜೆಪಿ ವರಿಷ್ಠರೊಂದಿಗೆ ಮಾತುಕತೆ ನಡೆಸಿದ್ದರು.

ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ ಎಲ್ಲಾ ಕಡೆ ಬಿಜೆಪಿ ಕಡೆಗಿನ ಒಲವು ಹೆಚ್ಚಾಗಿದೆ. ಮೈತ್ರಿ ಆಗುವುದರಿಂದ ಅನೇಕ ಹಿಂದೂಗಳು ಬಿಜೆಪಿ ಮತ್ತು ನಮ್ಮ ಪಕ್ಷವನ್ನು ಬೆಂಬಲಿಸುತ್ತಾರೆ. ಪಂಜಾಬ್‌ನಲ್ಲಿ ಶೇ. 36ರಷ್ಟು ಹಿಂದೂಗಳಿದ್ದು, ರೈತರ ಬೆಂಬಲವೂ ನಮಗೆ ಸಿಗಲಿದೆ. ಹೀಗಾಗಿ ನಾವು ಕಾಂಗ್ರೆಸ್‌ ಪಕ್ಷಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಮುಂದಿನ ಚುನಾವಣೆಯಲ್ಲಿ ಗೆಲ್ಲಲಿದ್ದೇವೆ ಎಂಬುದು ಅಮರೀಂದರ್‌ ಅವರ ಯೋಜನೆ.

Comments

Leave a Reply

Your email address will not be published. Required fields are marked *