ನನ್ನ ಸಾಮರ್ಥ್ಯವೇನು ಅನ್ನೋದನ್ನು ಬಾದಾಮಿಯಲ್ಲಿ ತೋರ್ಸಿದ್ದೀನಿ: ಸತೀಶ್ ಜಾರಕಿಹೊಳಿ

ಬೆಂಗಳೂರು: ನಾನು ಎಲ್ಲರ ರೀತಿ ಶೋ ಮಾಡುವ ರಾಜಕಾರಣಿ ಅಲ್ಲ ಎಂದು ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಎಲ್ಲರ ರೀತಿ ಶೋ ರಾಜಕಾರಣಿ ಅಲ್ಲ. ಅವಶ್ಯಕತೆ ಇದ್ದಾಗ ಪಕ್ಷಕ್ಕೆ ಕೆಲಸ ಮಾಡುತ್ತೇನೆ. ನನ್ನ ಸಾಮರ್ಥ್ಯ ಏನು ಎಂಬುದನ್ನು ಈಗಾಗಲೇ ವಿಧಾನಸಭಾ ಚುನಾವಣೆಯ ಬಾದಾಮಿ ಕ್ಷೇತ್ರದಲ್ಲಿ ತೋರಿಸಿದ್ದೇನೆ ಎಂದು ತಿಳಿಸಿದರು.

ಅಭಿವೃದ್ಧಿ ದೃಷ್ಟಿಯಿಂದ ಬೆಳಗಾವಿಯನ್ನು ಮೂರು ಭಾಗ ಮಾಡಬೇಕೆಂಬ ಬೇಡಿಕೆ ಮೊದಲಿನಿಂದಲೂ ಇದೆ. ನಮಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಗ್ಗೆ ಯಾವುದೇ ಬೇಸರ ಇಲ್ಲ. ಆವತ್ತಿನ ರಾಜಕೀಯ ಪರಿಸ್ಥಿತಿಯಲ್ಲಿ ನನ್ನನ್ನು ಸಚಿವ ಸಂಪುಟದಿಂದ ಕೈಬಿಟ್ಟಿರಬಹುದು. ಆದರೆ ಅದನ್ನೆ ಹಿಡಿದು ಕೂರುವ ಜಾಯಮಾನ ನನ್ನದಲ್ಲ. ನನ್ನ ಸಾಮರ್ಥ್ಯವೇನು ಎಂಬುದನ್ನು ಬಾದಾಮಿಯಲ್ಲಿ ನಡೆದ ಚುನಾವಣೆಯಲ್ಲೆ ತೋರಿಸಿದ್ದೇನೆ. ಅಲ್ಲಿಂದಲೇ ಸಿದ್ದರಾಮಯ್ಯನವರು ಗೆದ್ದಿದ್ದಾರೆ ಎಂದ್ರು.

ನನ್ನ ಮತ್ತು ಸಿದ್ದರಾಮಯ್ಯನವರ ನಡುವೆ ಯಾವುದೇ ಮನಸ್ತಾಪ ಇಲ್ಲ. ಅವರನ್ನು ಭೇಟಿ ಮಾಡುವ ಅವಶ್ಯಕತೆ ಇನ್ನೂ ಉಂಟಾಗಿಲ್ಲ. ಅಲ್ಲದೆ ಈಗಾಗಲೇ ರಮೇಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ. ಇಂದು ಸಂಜೆ ದೆಹಲಿಗೆ ಹೋಗುತ್ತಿದ್ದೇನೆ. ಅಲ್ಲಿ ಅವರೇನಾದರೂ ಸಿಕ್ಕರೆ ಖಂಡಿತವಾಗಿಯೂ ಭೇಟಿಯಾಗುತ್ತೇನೆ. ನಮ್ಮ ನಡುವೆ ಅಂತರ ಇದೆ ಅನ್ನುವ ಹೇಳಿಕೆಗಳು ತಪ್ಪು ಎಂದು ಸ್ಪಷ್ಟನೆ ನೀಡಿದರು.

ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ನಾನು ಈಗಾಗಲೇ ಲೀಡರ್ ಆಗಿದ್ದೇನೆ. ಸಚಿವನಾಗಿದ್ದುಕೊಂಡೇ ಕೆಲಸ ಮಾಡಬೇಕು ಅನ್ನುವುದು ತಪ್ಪು. ಈ ಮೊದಲು ಸಚಿವ ಸ್ಥಾನ ಹೋದ ಮೂರೇ ತಿಂಗಳಲ್ಲಿ ಗುಂಡ್ಲುಪೇಟೆ ಚುನಾವಣೆಯಲ್ಲಿ ಕೆಲಸಮಾಡಿ ನಮ್ಮ ಶಕ್ತಿ ತೋರಿಸಿದ್ದೇನೆ ಎಂದು ಹೇಳಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *