ರಾಹುಲ್‍ಗೆ ಶಾಕ್ – ಕೈ ಸೇರಿದ 2 ವರ್ಷಕ್ಕೆ ಹೊರನಡೆದ ಅಲ್ಪೇಶ್ ಠಾಕೂರ್

ಗಾಂಧಿನಗರ: ಲೋಕಸಭಾ ಚುನಾವಣಾ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೇ ವೇಳೆ ಎರಡು ವರ್ಷದ ಹಿಂದೆ ಗುಜರಾತ್ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷದ ಕೈ ಹಿಡಿದು ಬಿಜೆಪಿಗೆ ತಲೆ ನೋವಾಗಿದ್ದ ಹಿಂದುಳಿದ ವರ್ಗಗಳ ನಾಯಕ ಅಲ್ಪೇಶ್ ಠಾಕೂರ್ ಪಕ್ಷದಿಂದ ಹೊರ ನಡೆದಿದ್ದಾರೆ.

ಕಳೆದ ಒಂದು ತಿಂಗಳ ಹಿಂದೆಯಷ್ಟೇ ಕಾಂಗ್ರೆಸ್ ಪಕ್ಷದಲ್ಲಿನ ಗೊಂದಲಗಳಿಂದ ಬಿಜೆಪಿ ಸೇರ್ಪಡೆಯಾಗುತ್ತಾರೆ ಎಂಬ ವರದಿಯನ್ನ ಅಲ್ಪೇಶ್ ಅಲ್ಲಗೆಳೆದಿದ್ದರು. ಆದರೆ ಲೋಕಸಭಾ ಚುನಾವಣೆ ಮೊದಲ ಹಂತದ ಮತದಾನಕ್ಕೆ ಕೆಲವೇ ದಿನ ಬಾಕಿ ಇರುವ ವೇಳೆ ಪಕ್ಷದಿಂದ ಹೊರ ನಡೆದಿದ್ದಾರೆ.

ಕಾಂಗ್ರೆಸ್ ಪಕ್ಷ ಠಾಕೂರ್ ಸಮುದಾಯವನ್ನು ನಿರ್ಲಕ್ಷ್ಯ ಮಾಡುತ್ತಿದೆ ಎಂದು ಬೇಸತ್ತ ಅವರು ಇತರೇ ಇಬ್ಬರು ಶಾಸಕರೊಂದಿಗೆ ಪಕ್ಷ ತೊರೆದಿದ್ದಾರೆ. ನನ್ನ ಜನರ ಹಕ್ಕುಗಳ ರಕ್ಷಣೆಗಾಗಿ ತಾವು ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.

ಗುಜರಾತ್ ಚುನಾವಣೆ ವೇಳೆ ಯುವ ತ್ರಿವಳಿ ನಾಯಕರಾದ ಅಲ್ಪೇಶ್ ಠಾಕೂರ್, ಹಾರ್ದಿಕ್ ಪಾಟೇಲ್, ಜಿಗ್ನೇಶ್ ಮೇವಾನಿ ಬಿಜೆಪಿಗೆ ತಲೆನೋವಾಗಿದ್ದರು. 2011 ರಲ್ಲಿ ಗುಜರಾತ್ ಕ್ಷತ್ರಿಯ ಠಾಕೂರ್ ಸೇನಾ ಸಂಘಟನೆ ನಿರ್ಮಿಸಿದ್ದ ಠಾಕೂರ್ ತಮ್ಮ ಜನಾಂಗದ ಪರ ಹೋರಾಟಕ್ಕೆ ಇಳಿದಿದ್ದರು. ಅಲ್ಲದೇ ಓಬಿಸಿ, ಎಸ್‍ಟಿ ಎಸ್‍ಸಿ ಏಕತಾ ವೇದಿಕೆ ನಿರ್ಮಿಸಿ ಶೋಷಿತ ಸಮುದಾಯಗಳ ಪರ ಆಂದೋಲಗಳನ್ನು ರೂಪಿಸಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‍ನಲ್ಲಿ ಬೃಹತ್ ಸಮಾವೇಶ ನಡೆಸಲಿದ್ದು, ಇದೇ ವೇಳೆ ಅಲ್ಪೇಶ್ ಠಾಕೂರ್ ಬಿಜೆಪಿಗೆ ಸೇರ್ಪಡೆ ಆಗಲಿದ್ದಾರೆ ಎನ್ನಲಾಗಿದೆ. ಇತ್ತ ಲೋಕಸಭಾ ಚುನಾವಣೆಯ ಸಮಯದಲ್ಲೇ ಪಕ್ಷ ತೊರೆದಿರುವ ಅಲ್ಪೇಶ್ ಠಾಕೂರ್ ಅವರ ನಡೆ ಕಾಂಗ್ರೆಸ್ ಪಕ್ಷದ ಮೇಲೆ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆಯಿದೆ.

Comments

Leave a Reply

Your email address will not be published. Required fields are marked *