ಮಹಿಳೆಯರ ಮೇಲೆ ಹಲ್ಲೆ – ಆರೋಪ ಸಾಬೀತಾದರೆ ಶಿಕ್ಷೆ ಪಡೆಯುವೆ ಎಂದ ಪಿಎಸ್‍ಐ

ಚಿಕ್ಕಬಳ್ಳಾಪುರ: ಅಸಹಾಯಕ ಮಹಿಳೆಯರನ್ನು ಠಾಣೆಗೆ ಕರೆಸಿ ಹಿಗ್ಗಾಮುಗ್ಗಾ ಬಾರಿಸಿದ ಆರೋಪವೊಂದು ರಾಮನಗರ ಜಿಲ್ಲೆ ಕನಕಪುರ ನಗರ ಪೊಲೀಸ್ ಠಾಣೆಯ ಪಿಎಸ್‍ಐ ಮೇಲೆ ಕೇಳಿ ಬಂದಿದೆ.

ಪಿಎಸ್‍ಐ ಅನಂತರಾಮ್ ವಿರುದ್ಧ ಆರೋಪ ಕೇಳಿ ಬಂದಿದ್ದು, ಮನೆ ಭೋಗ್ಯದ ವಿಚಾರವಾಗಿ ಮಾತನಾಡಲು ಠಾಣೆಗೆ ತಾಯಿ, ಮಗಳಾದ ಗಿರಿಜಾಂಬ ಮತ್ತು ಲಕ್ಷ್ಮೀದೇವಿ ಇಬ್ಬರನ್ನು ಠಾಣೆಗೆ ಕರೆಸಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಗಿರಿಜಾಂಬ ತಂದೆ ಶಿವಲಿಂಗಚಾರಿ ಕನಕಪುರದಲ್ಲಿ ಮುನಿರುದ್ರಾಚಾರಿ ಎಂಬವರಿಂದ ಮನೆ ಭೋಗ್ಯಕ್ಕೆ ಪಡೆದಿದ್ದರು. ಲೀಸ್‍ನ ಅವಧಿ ಮುಗಿದ್ದರೂ ಸಹ ಶಿವಲಿಂಗಚಾರಿ ಅದೇ ಮನೆಯಲ್ಲಿ ವಾಸಿಸುತ್ತಿದ್ದರು. ನಿಮ್ಮ ಹಣವನ್ನು ವಾಪಸ್ ನೀಡಿದ್ದೇನೆ ಮನೆ ಖಾಲಿ ಮಾಡಿ ಎಂದರೂ ಸಹ ಶಿವಲಿಂಗಚಾರಿ ಮನೆ ಖಾಲಿ ಮಾಡಿರಲಿಲ್ಲ. ಶಿವಲಿಂಗಚಾರಿ ಮನೆ ಖಾಲಿ ಮಾಡಲು ಒಪ್ಪದಿದ್ದಾಗ ಮುನಿರುದ್ರಾಚಾರಿ ಪೊಲೀಸ್ ಠಾಣೆ ಮಟ್ಟಿಲೇರಿದರು.

ಈ ವಿಚಾರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಕ್ಕೆ ಪಿಎಸ್‍ಐ ಸಂಧಾನ ಮಾಡಿಸಲು ಮುಂದಾಗಿದ್ದಾರೆ. ಸಂಧಾನ ಮಾತುಕತೆಗೆ ಪಿಎಸ್‍ಐ ಶಿವಲಿಂಗಾಚಾರಿ ಮಗಳು, ಹೆಂಡತಿಯನ್ನು ಠಾಣೆಗೆ ಕರೆಯಿಸಿದ್ದರು. ಈ ವೇಳೆ ಪಿಎಸ್‍ಐ ಅನಂತರಾಮ್ ಅವಾಚ್ಯ ಶಬ್ದಗಳಿಂದ ನಿಂದಿಸಿ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಮಹಿಳೆಯರು ಆರೋಪಿಸಿದ್ದಾರೆ. ಅಲ್ಲದೆ ಈ ಬಗ್ಗೆ ಮಹಿಳೆಯರು ರಾಮನಗರ ಜಿಲ್ಲಾ ಎಸ್‍ಪಿಗೆ ದೂರು ನೀಡಿದ್ದರು.

ಪಿಎಸ್‍ಐ ಅನಂತರಾಮ್ ಈ ಆರೋಪವನ್ನು ತಳ್ಳಿ ಹಾಕಿದ್ದಾರೆ. ನಾನು ಮಹಿಳೆಯರ ಮೇಲೆ ಹಲ್ಲೆ ಮಾಡಿಲ್ಲ, ಬೇಕಿದ್ದರೆ ವಿಚಾರಣೆ ನಡೆಸಿ. ನಾನು ಸಂಧಾನ ಮಾಡಿಸಲು ಅವರನ್ನು ಠಾಣೆಗೆ ಕರೆಸಿದೆ. ಆದರೆ ನಾನು ಅವರ ಮೇಲೆ ಹಲ್ಲೆ ಮಾಡಿಲ್ಲ ಹಾಗೂ ಅವಾಚ್ಯ ಶಬ್ಧಗಳಿಂದ ನಿಂದಿಸಿಲ್ಲ. ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಯಲಿ. ಹಲ್ಲೆ ನಡೆದಿರುವುದು ಸಾಬೀತಾದರೆ ನಾನು ಯಾವ ಶಿಕ್ಷೆ ಬೇಕಾದರೂ ಪಡೆದುಕೊಳ್ಳುತ್ತೇನೆ ಎಂದು ಪಿಎಸ್‍ಐ ಅನಂತರಾಮ್ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *