ಬಿಜೆಪಿ ಕಾರ್ಯಕರ್ತನ ಮೇಲಿನ ಹಲ್ಲೆ ಆರೋಪ ಸತ್ಯಕ್ಕೆ ದೂರವಾದದ್ದು: ಚನ್ನರಾಜ ಹಟ್ಟಿಹೊಳಿ

ಚಿಕ್ಕೋಡಿ (ಬೆಳಗಾವಿ): ಬಿಜೆಪಿ (BJP) ಕಾರ್ಯಕರ್ತನ ಮೇಲಿನ ಹಲ್ಲೆ ಆರೋಪಕ್ಕೆ ಸಂಬಂಧಿಸಿದಂತೆ ಸ್ವತಃ ಕಾಂಗ್ರೆಸ್ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ (Channaraja Hattiholi) ಸ್ಪಷ್ಟನೆ ನೀಡಿದ್ದಾರೆ.

ಬೆಳಗಾವಿಯಲ್ಲಿ (Belagavi) ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿರುವ ಅವರು, ಈ ಆರೋಪ ಸತ್ಯಕ್ಕೆ ದೂರವಾಗಿದ್ದಾಗಿದೆ. ಸುಳ್ಳು ಆರೋಪ ಎಂದಿದ್ದಾರೆ. ನಾವು ಹಲ್ಲೆ ಮಾಡುವ ಕೆಲಸಕ್ಕೆ ಕೈ ಹಾಕುವುದಿಲ್ಲ, ಶಿಸ್ತಿನಿಂದ ರಾಜಕೀಯ ಮಾಡುತ್ತೇವೆ. ಈ ಬಗ್ಗೆ ತನಿಖೆ ಆಗಬೇಕು ಸ್ಪಷ್ಟ ಮಾಹಿತಿ ಹೊರಬರಬೇಕು. ಹಲ್ಲೆ ಯಾರು ಮಾಡಿದರೂ ಎನ್ನುವುದರ ಬಗ್ಗೆ ಫಾರೆನ್ಸಿಕ್ ರಿಪೋರ್ಟ್ ಬರಬೇಕಾಗುತ್ತದೆ. ಪೊಲೀಸ್ ಇಲಾಖೆಯಲ್ಲಿ ಈ ಬಗ್ಗೆ ಸಾಕಷ್ಟು ಅನುಮಾನಗಳಿವೆ ಎಂದಿದ್ದಾರೆ.

ಪೃಥ್ವಿ ಸಿಂಗ್ ಒಬ್ಬ ನಟೋರಿಯಸ್ ಬ್ಲಾಕ್ ಮೇಲ್ ಮನುಷ್ಯ. ಅವನು ಸುಳ್ಳು ಹೇಳುತ್ತಿದ್ದಾನೆ. ನನ್ನ ಆತ್ನೀಯರು ಅವನ ಮನೆಗೆ ಭೇಟಿಗೆ ಹೋಗಿದ್ದು ನಿಜ. ಅವನ ಮನೆಯಲ್ಲಿ ಮೊದಲು ನಮ್ಮ ಕಚೇರಿಯಿತ್ತು. ಆ ರೆಂಟ್ ಅಗ್ರಿಮೆಂಟ್ ವಾಪಸ್ ಕೇಳಲು ನನ್ನ ಆತ್ಮೀಯರು ಹೋಗಿದ್ದರು. ಇದೇ ಸನ್ನಿವೇಶ ಇಟ್ಟುಕೊಂಡು ಆತ ದೃಶ್ಯ ಹೆಣೆದಿದ್ದಾನೆ. ಇದರಲ್ಲಿ ಯಾವುದೇ ರಾಜಕೀಯ ವೈಷಮ್ಯವಿಲ್ಲ. ಅವನಿಗೆ ರಿಕಾರ್ಡಿಂಗ್ ಮಾಡುವ ಹಾಗೂ ವೀಡಿಯೋ ಮಾಡುವ ಚಟ ಇದೆ. ಅವನು ನನಗೆ ಯಾವುದೇ ರೀತಿಯ ಬ್ಲಾಕ್ ಮೇಲ್ ಮಾಡಿಲ್ಲ. ಏನೋ ಮಾಡಲು ಹೋಗಿ ತಾನೇ ಸಿಕ್ಕಾಕಿಕೊಂಡಿದ್ದಾನೆ ಎಂದರು. ಇದನ್ನೂ ಓದಿ: ಜಾರಕಿಹೊಳಿ ಆಪ್ತನಿಗೆ ಚಾಕು ಇರಿತ – ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರನಿಂದ ಕೃತ್ಯ ಆರೋಪ

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಹೋಗುವುದು ಹೊಸದೇನಲ್ಲ. ಮಾಧ್ಯಮದಲ್ಲಿ ಬಂದಿದ್ದಕ್ಕೆ ಹೋಗಿ ಭೇಟಿ ನೀಡಿದ್ದಾರೆ. ಅವನು ಸುಳ್ಳು ಹೇಳುತ್ತಿದ್ದಾನೆ. ಅವನಿಗೆ ಬೆಂಬಲ ಕೊಡಬೇಡಿ. ತನಿಖೆ ಮಾಹಿತಿ ಬರೋವರೆಗೆ ತಾಳ್ಮೆಯಿಂದ ಇರುವಂತೆ ಬಿಜೆಪಿ ನಾಯಕರಿಗೆ ಚನ್ನರಾಜ ಹಟ್ಟಿಹೊಳಿ ಮನವಿ ಮಾಡಿದ್ದಾರೆ.