ಮಹಿಳಾ ಅಧಿಕಾರಿ ಮೇಲೆ ಅವಾಚ್ಯ ಪದ ಬಳಕೆ – ಭದ್ರಾವತಿ ಕಾಂಗ್ರೆಸ್ ಶಾಸಕ ಪುತ್ರನ ವಿರುದ್ಧ ಆರೋಪ

ಶಿವಮೊಗ್ಗ: ಮಹಿಳಾ ಅಧಿಕಾರಿ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಆರೋಪ ಭದ್ರಾವತಿ ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ ಪುತ್ರನ ಮೇಲೆ ಕೇಳಿಬಂದಿದೆ.

ಅಶ್ಲೀಲ ಪದ ಬಳಸಿ ರೌಡಿಸಂ ಮಾತುಗಳಲ್ಲಿ ಮಹಿಳಾ ಅಧಿಕಾರಿಗೆ ಬೈದಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿದೆ. ಗಣಿ ಮತ್ತು ಭೂ ವಿಜ್ಞಾನ ಮಹಿಳಾ ಅಧಿಕಾರಿಗೆ ಅಶ್ಲೀಲ ಪದಗಳಲ್ಲಿ ಶಾಸಕರ ಪುತ್ರ ನಿಂದಿಸಿದ್ದಾರೆಂದು ಆರೋಪಿಸಲಾಗಿದೆ.

ಅಕ್ರಮ ಮರಳು ಗಣಿಗಾರಿಕೆ ಜಾಗದ ಮೇಲೆ ತಡರಾತ್ರಿ ರೇಡ್ ನಡೆಸಿದ ವೇಳೆ ಘಟನೆ ನಡೆದಿದೆ. ಈ ಮಹಿಳಾ ಅಧಿಕಾರಿಯು ಭದ್ರಾವತಿ ಭಾಗದಲ್ಲಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆ ಮೇಲೆ ದಾಳಿ ಮಾಡಿದ್ದರು.

ಮಹಿಳಾ ಅಧಿಕಾರಿಯ ಮೇಲೆ ಎಂಎಲ್‌ಎ ಮಗನ ದರ್ಪದ ಕುರಿತು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಈ ಕುರಿತು ಶಾಸಕ ಸಂಗಮೇಶ್‌ ಪ್ರತಿಕ್ರಿಯೆ ನೀಡಿದ್ದು, ಅಲ್ಲಿ ಮಾತನಾಡಿರುವುದು ನನ್ನ ಮಗ ಅಲ್ಲ. ಯಾರೋ ಬಿಜೆಪಿ, ಜೆಡಿಎಸ್‌ನವರು ಕುತಂತ್ರ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.