ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ – ಲಕ್ಷ್ಯ ಸೇನ್‌ ರನ್ನರ್‌ ಅಪ್‌

ಬರ್ಮಿಂಗ್‌ಹ್ಯಾಮ್‌: ಭಾರತದ ಯುವ ಶಟ್ಲರ್‌ 20 ವರ್ಷದ ಲಕ್ಷ್ಯ ಸೇನ್‌ ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ನಲ್ಲಿ ರನ್ನರ್‌ ಆಗಿ ಹೊರಹೊಮ್ಮಿದ್ದಾರೆ.

ಭಾನುವಾರ ರಾತ್ರಿ ನಡೆದ ಫೈನಲ್‌ನಲ್ಲಿ ವಿಶ್ವದ ನಂ.1 ಆಟಗಾರ, ಡೆನ್ಮಾರ್ಕ್‌ನ ವಿಕ್ಟರ್‌ ಅಕ್ಸೆಲ್ಸೆನ್‌ ವಿರುದ್ಧ ಪರಾಭವಗೊಂಡಿದ್ದಾರೆ. ಟೋಕಿಯೊ ಒಲಿಂಪಿಕ್ಸ್‌ ಚಾಂಪಿಯನ್‌ ಅಕ್ಸೆಲ್ಸೆನ್‌ ವಿರುದ್ಧ 21-10, 21-15 ಅಂತರದಿಂದ ಲಕ್ಷ್ಯ ಸೇನ್‌ ಸೋತಿದ್ದಾರೆ. 6.3 ಅಡಿ ಎತ್ತರದ ಅಕ್ಸೆಲ್ಸೆನ್‌ ವಿರುದ್ಧ 5.8 ಎತ್ತರದ ಲಕ್ಷ್ಯ ಸೇನ್‌ ಎರಡನೇ ಸುತ್ತಿನಲ್ಲಿ ಸ್ವಲ್ಪ ಪ್ರತಿರೋಧ ತೋರಿದರೂ ಯಶಸ್ವಿಯಾಗಲಿಲ್ಲ.

ಒಂದು ವೇಳೆ ಪ್ರಶಸ್ತಿ ಗೆದ್ದಿದ್ದರೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನೆತ್ತಿದ ಭಾರತದ ಮೂರನೇ ಬ್ಯಾಡ್ಮಿಂಟನ್‌ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರವಾಗುತ್ತಿದ್ದರು. 1980ರಲ್ಲಿ ಪ್ರಕಾಶ್‌ ಪಡುಕೋಣೆ, 2001ರಲ್ಲಿ ಪುಲ್ಲೇಲ ಗೋಪಿಚಂದ್‌ ಪ್ರಶಸ್ತಿ ಎತ್ತಿದ್ದರು.

ಇದು ಅಕ್ಸೆಲ್ಸೆನ್‌ ವಿರುದ್ಧ ಆಡಿದ 6 ಪಂದ್ಯಗಳಲ್ಲಿ ಲಕ್ಷ್ಯ ಸೇನ್‌ ಅನುಭವಿಸಿದ 5ನೇ ಸೋಲು. ಕಳೆದ ಜರ್ಮನ್‌ ಓಪನ್‌ ಸೆಮಿಫೈನಲ್‌ನಲ್ಲಿ ಮಾತ್ರ ಲಕ್ಷ್ಯ ಸೇನ್‌ ಗೆದ್ದಿದ್ದರು. ಇದನ್ನೂ ಓದಿ: 7 ನಂಬರ್ ಜೆರ್ಸಿ ಹಿಂದಿನ ಕಹಾನಿ ಬಿಚ್ಚಿಟ್ಟ ಧೋನಿ

ನೀವು ಉತ್ಸಾಹಭರಿತ ಹೋರಾಟವನ್ನು ಮಾಡಿದ್ದೀರಿ. ನಿಮ್ಮ ಮುಂದಿನ ಪ್ರಯತ್ನಗಳಿಗೆ ಶುಭಾಶಯಗಳು. ನೀವು ಯಶಸ್ಸಿನ ಹೊಸ ಎತ್ತರಗಳನ್ನು ಏರುತ್ತಲೇ ಇರುತ್ತೀರಿ ಎಂಬ ವಿಶ್ವಾಸ ನನಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಲಕ್ಷ್ಯ ಸೇನ್‌ ಅವರನ್ನು ಅಭಿನಂದಿಸಿ ಶುಭ ಹಾರೈಸಿದ್ದಾರೆ.

ಭಾರತದ ಜೋಡಿಗೆ ಸೋಲು: ವನಿತಾ ಡಬಲ್ಸ್‌ ಸೆಮಿಫೈನಲ್‌ನಲ್ಲಿ ಭಾರತದ ತ್ರಿಷಾ ಜಾಲಿ-ಗಾಯತ್ರಿ ಗೋಪಿಚಂದ್‌ ಜೋಡಿ ಪರಾಭವಗೊಂಡಿತು. ಚೀನದ ಶು ಕ್ಸಿಯಾನ್‌ ಜಾಂಗ್‌-ಯು ಜೆಂಗ್‌ 21-17, 21-16 ನೇರ ಗೇಮ್‌ಗಳಿಂದ ಸೋಲಿಸಿ ಫೈನಲ್‌ ಪ್ರವೇಶಿಸಿದರು.

Comments

Leave a Reply

Your email address will not be published. Required fields are marked *