ಮದ್ಯ ಪ್ರಿಯರಿಗೆ ಚುನಾವಣೆ ಸೈಡ್ ಎಫೆಕ್ಟ್

ಬೆಂಗಳೂರು: ಚುನಾವಣೆ ಹಿನ್ನೆಲೆಯಲ್ಲಿ ನಗರದಲ್ಲಿ ನಾಲ್ಕು ದಿನ ಮದ್ಯ ನಿಷೇಧ ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತ ಟಿ ಸುನೀಲ್ ಕುಮಾರ್ ಆದೇಶ ಮಾಡಿದ್ದಾರೆ.

ಮೇ 10, ಸಂಜೆ 5 ಘಂಟೆಯಿಂದ ಮೇ 12 ಮಧ್ಯರಾತ್ರಿಯವರೆಗೆ ಮದ್ಯವನ್ನು ನಿಷೇಧಿಸಲಾಗಿದೆ. ಮತದಾನದ ದಿನ ಸೇರಿ 3 ರಾತ್ರಿ ಮದ್ಯ ಮಾರಾಟ ಇರುವುದಿಲ್ಲ ಎಂದು ತಿಳಿಸಿದರು. ಮೇ 15 ಮತ ಎಣಿಕೆ ದಿನವೂ ಕೂಡ ಮಧ್ಯ ಮಾರಾಟ ನಿಷೇಧಿಸಲಾಗಿದೆ ಎಂದು ತಿಳಿಸಿದರು.

ಬಾರ್ ಗಳಿಗೆ ಬೀಗ
ಚುನಾವಣೆ ಸಮಯದಲ್ಲಿ ಮತದಾರರನ್ನು ಸೆಳೆಯಲು ಕೆಲ ರಾಜಕಾರಣಿಗಳು ಮದ್ಯ ಹಂಚಲು ಮುಂದಾಗುತ್ತಾರೆ. ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿ ಆದಾಗಿನಿಂದ ಪ್ರತಿನಿತ್ಯ ರಾಜ್ಯಾದ್ಯಂತ ಅಧಿಕಾರಿಗಳು ಅಕ್ರಮ ಮದ್ಯವನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ಅಕ್ರಮ ಮದ್ಯ ಸಾಗಾಟ ನಿಯಂತ್ರಿಸಲು ಚುನಾವಣಾ ಅಧಿಕಾರಿಗಳು ಬೆಂಗಳೂರು ಸೇರಿದಂತೆ ಅಕ್ರಮ ಬಾರ್ ಗಳಿಗೆ ಬೀಗ ಹಾಕಿದ್ದಾರೆ.

ಪರವಾನಿಗೆಯನ್ನು ನವೀಕರಣ ಮಾಡಿಕೊಳ್ಳದ ಬಾರ್ ಗಳನ್ನು ಸಹ ಮುಚ್ಚುವಂತೆ ಆದೇಶ ಹೊರಡಿಸಲಾಗಿದೆ. ಟೋಕನ್ ಗಳ ಮೂಲಕ ಮತದಾರರಿಗೆ ಮದ್ಯ ಹಂಚಲಾಗುತ್ತಿದೆ ಎಂಬ ಮಾತುಗಳು ಕೇಳಿಬರತೊಡಗಿದ್ದವು. ಈ ಹಿನ್ನೆಲೆಯಲ್ಲಿ ಲೈಸನ್ಸ್ ಪಡೆಯದೇ ತೆರೆದಿರುವ ಬಾರ್ ಗಳನ್ನು ಗುರುತಿಸಿ, ಅವುಗಳಿಗೆ ಬೀಗ ಹಾಕಲಾಗಿದೆ.

ಕರ್ನಾಟಕದಾದ್ಯಂತ ಒಟ್ಟು 508 ಅಕ್ರಮ ಬಾರ್ ಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ 245 ಬೆಂಗಳೂರು ನಗರದಲ್ಲಿವೆ. ಮತದಾರರಿಗೆ ಮದ್ಯ ಹಂಚುವ ಮೂಲಕ ವೋಟ್ ಪಡೆಯಲು ಮುಂದಾಗಿದ್ದವರಿಗೆ ಚುನಾವಣಾ ಆಯೋಗ ಸರಿಯಾಗಿಯೇ ಬಿಸಿ ಮುಟ್ಟಿಸಿದೆ.

ಬೆಂಗಳೂರು ನಗರದಲ್ಲಿ ಮುಚ್ಚಲ್ಪಟ್ಟ ಬಾರ್ ಗಳ ಪಟ್ಟಿ ಹೀಗಿದೆ:
ಬೆಂಗಳೂರು ಪೂರ್ವ ವಿಭಾಗ- 123
ಬೆಂಗಳೂರು ದಕ್ಷಿಣ ವಿಭಾಗ- 62
ಬೆಂಗಳೂರು ಪೂರ್ವ ವಿಭಾಗ- 56
ಬೆಂಗಳೂರು ಪಶ್ಚಿಮ ವಿಭಾಗ- 4

Comments

Leave a Reply

Your email address will not be published. Required fields are marked *