ಪಾಕ್‌ನಲ್ಲಿರುವ ಆಫ್ಘನ್ನರಿಗೆ ದೇಶ ತೊರೆಯುವಂತೆ ರಕ್ಷಣಾ ಸಚಿವ ಖವಾಜಾ ವಾರ್ನಿಂಗ್‌

– ಭಾರತದ ನೆರವಿನಿಂದ ನಮ್ಮ ವಿರುದ್ಧವೇ ತಾಲಿಬಾನ್‌ ಪಿತೂರಿ ಮಾಡ್ತಿದೆ ಎಂದು ಆರೋಪ

ಇಸ್ಲಾಮಾಬಾದ್: ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಸಂಘರ್ಷ ಮತ್ತೆ ಮುಂದುವರಿದಿದೆ. ಕದನ ವಿರಾಮ ಉಲ್ಲಂಘಿಸಿ ಪಾಕ್‌ ವಾಯುದಾಳಿ (Pakistan AirStrike) ನಡೆಸಿದ ಬಳಿಕ ಅಫ್ಘಾನಿಸ್ತಾನ ಪ್ರತಿದಾಳಿಗೆ ಮುಂದಾಗಿದೆ. ತಡರಾತ್ರಿ ಪಾಕ್‌ ನಡೆಸಿದ ವೈಮಾನಿಕ ದಾಳಿಯಲ್ಲಿ ಅಫ್ಘಾನ್‌ನ 10 ಮಂದಿ ಮೃತಪಟ್ಟಿದ್ದಾರೆ. ಈ ಎಲ್ಲ ಬೆಳವಣಿಗೆಗಳ ನಡುವೆಯೇ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ (Khawaja Asif), ಪಾಕ್‌ನಲ್ಲಿರುವ ಆಫ್ಘನ್ನರು ದೇಶ ತೊರೆಯುವಂತೆ ಎಚ್ಚರಿಕೆ ನೀಡಿದ್ದಾರೆ.

ಅಫ್ಘಾನಿಸ್ತಾನ (Afghanistan) ಸರ್ಕಾರ ನೆರೆಹೊರೆಯವರೊಂದಿಗೆ ಇದ್ದ ಹಳೆಯ ಸಂಬಂಧಗಳನ್ನ ಕಳೆದುಕೊಂಡಿದೆ. ಇಲ್ಲಿನ ದೇಶದ ಸಂಪನ್ಮೂಲಗಳು 2.50 ಕೋಟಿ ಪಾಕಿಸ್ತಾನಿಯರಿಗೆ ಸೇರಿದ್ದೇ ಹೊರತು, ಆಫ್ಘನ್ನರಿಗೆ ಅಲ್ಲ. ಹಾಗಾಗಿ ಕೂಡಲೇ ಆಫ್ಘನ್ನರು ಪಾಕ್‌ ತೊರೆದು ತಾಯ್ನಾಡಿಗೆ ಮರಳಬೇಕು. ಈಗ ಅಲ್ಲಿ ತಮ್ಮದೇ ಸರ್ಕಾರವನ್ನ ಅವರು ಹೊಂದಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕದನ ವಿರಾಮ ಉಲ್ಲಂಘಿಸಿ ಪಾಕ್ ಏರ್‌ಸ್ಟ್ರೈಕ್‌ – ಮೂವರು ಅಫ್ಘಾನ್‌ ಕ್ರಿಕೆಟಿಗರು ಸಾವು; ರಶೀದ್‌ ಖಾನ್‌ ಖಂಡನೆ

ಪಾಕಿಸ್ತಾನ ಹಲವು ವರ್ಷಗಳಿಂದ ತಾಳ್ಮೆ ವಹಿಸುತ್ತಲೇ ಬಂದಿದೆ. ಗಡಿಯಾಚೆಗಿನ ಭಯೋತ್ಪಾದನಾ ಘಟನೆಗಳ ಕುರಿತು 836 ಪ್ರತಿಭಟನಾ ಟಿಪ್ಪಣಿಗಳನ್ನ ಕಳಿಸಿದೆ. ಆದ್ರೆ ಅಫ್ಘಾನ್‌ನಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ. ಹಾಗಾಗಿ ಇನ್ಮುಂದೆ ನಮ್ಮ ಮನವಿಗಳು ಶಾಂತಿಯುತವಾಗಿರಲ್ಲ. ಪಾಕಿಸ್ತಾನದ ಯಾವುದೇ ನಿಯೋಗಗಳೂ ಕಾಬೂಲ್‌ಗೆ ಹೋಗಲ್ಲ. ಭಯೋತ್ಪಾದನೆಯ ಮೂಲ ಎಲ್ಲಿದ್ದರೂ, ಅದು ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಉಗ್ರಕೃತ್ಯಗಳಿಗೆ ಬೆಂಬಲ ನೀಡುವ ಪಾಕ್‌ ಹೇಳಿಕೊಂಡಿದೆ.

ಭಾರತದ ಪ್ರಾಕ್ಸಿ ತಾಲಿಬಾನ್‌
ತಾಲಿಬಾನ್ ಸರ್ಕಾರವು ʻಭಾರತದ ಪ್ರಾಕ್ಸಿʼಯಾಗಿ ಕೆಲಸ ಮಾಡುತ್ತಿದೆ. ಭಾರತದ ನೆರವಿನಲ್ಲಿ ಪಾಕಿಸ್ತಾನದ ವಿರುದ್ಧ ಕಾಬೂಲ್‌ ಆಡಳಿತಾಧಿಕಾರಿಗಳು ಪಿತೂರಿ ನಡೆಸುತ್ತಿದ್ದಾರೆ. ಒಂದು ಕಾಲದಲ್ಲಿ ನಮ್ಮ ರಕ್ಷಣೆಯಲ್ಲಿದ್ದರು, ನಮ್ಮ ನೆಲದಲ್ಲಿ ಅಡಗಿಕೊಂಡಿದ್ದರು ಈಗ ಭಾರತದ ನೆರವಿನಲ್ಲಿ ನಮ್ಮ ವಿರುದ್ಧವೇ ತಿರುಗಿಬಿದ್ದಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: 24 ಗಂಟೆಯಲ್ಲಿ 300 ನಕ್ಸಲರ ಶರಣಾಗತಿ – ಭಯೋತ್ಪಾದನೆ ಮುಕ್ತ ಪ್ರದೇಶಗಳಲ್ಲಿ ಈ ಬಾರಿ ಶಾಂತಿಯ ದೀಪಾವಳಿ: ಮೋದಿ

ಅಫ್ಘಾನ್ ಯುವ ಕ್ರಿಕೆಟಿಗರ ದುರ್ಮರಣ
ಕ್ರಿಕೆಟ್ ಟೂರ್ನಿಗಾಗಿ ಈ ಪ್ರದೇಶಕ್ಕೆ ಬಂದಿದ್ದ ಮೂವರು ಯುವ ಕ್ರಿಕೆಟ್ ಆಟಗಾರರು ಸಾವನ್ನಪ್ಪಿದ್ದಾರೆ. ಕಬೀರ್, ಸಿಬ್ಘತ್ ಉಲ್ಲಾ ಮತ್ತು ಹರೂನ್ ಸಾವನ್ನಪ್ಪಿದವರು ಎಂದು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ತಿಳಿಸಿದೆ. ಘಟನೆಗೆ ತೀವ್ರ ಖಂಡನೆ ವ್ಯಕ್ತಪಡಿಸಿರುವ ಅಫ್ಘಾನ್ ಕ್ರಿಕೇಟ್ ಮಂಡಳಿ, ಈ ದಾಳಿಯನ್ನು ಪಾಕಿಸ್ತಾನ ಆಡಳಿತದ ಹೇಡಿತನದ ಕೃತ್ಯ ಎಂದು ಬಣ್ಣಿಸಿದೆ.

ತ್ರಿಕೋನ ಟಿ20 ಸರಣಿಯಿಂದ ಹಿಂದೆ ಅಫ್ಘಾನ್
ಘಟನೆ ಬೆನ್ನಲ್ಲೇ ಮುಂದಿನ ತಿಂಗಳು ನಡೆಯಲಿರುವ ಪಾಕಿಸ್ತಾನ ಒಳಗೊಂಡ ತ್ರಿಕೋನ ಟಿ20 ಸರಣಿಯಿಂದ ಹಿಂದೆ ಸರಿಯುತ್ತಿರುವುದಾಗಿಯೂ ಅಫ್ಘಾನ್ ಕ್ರಿಕೆಟ್ ಮಂಡಳಿ ಹೇಳಿದೆ. ನವೆಂಬರ್ 5 ರಿಂದ 29ರ ವರೆಗೆ ಲಾಹೋರ್ ಮತ್ತು ರಾವಲ್ಪಿಂಡಿಯಲ್ಲಿ ನಡೆಯಲಿದ್ದ ತ್ರಿಕೋನ ಸರಣಿಯಲ್ಲಿ ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳು ಭಾಗವಹಿಸಬೇಕಾಗಿತ್ತು.