ಕುಡಿಯಲು ಹಣ ಕೊಡದ್ದಕ್ಕೆ ಗರ್ಭಿಣಿ ಪತ್ನಿ ತಲೆಗೆ ಗುಂಡು ಹೊಡೆದ- ಭಯದಿಂದ ಪೊದೆಯಲ್ಲಿ ಅವಿತ ಮಗ

– ಪತ್ನಿ ಕೊಂದು ಆರೋಪಿ ಸ್ಥಳದಿಂದ ಎಸ್ಕೇಪ್
– 4 ಗಂಟೆಯ ನಂತ್ರ ಪೊದೆಯೊಳಗೆ ಮಗ ಪತ್ತೆ

ಲಕ್ನೋ: ವ್ಯಕ್ತಿಯೊಬ್ಬ ಮದ್ಯ ಖರೀದಿಸಲು ಹಣ ನೀಡಲು ನಿರಾಕರಿಸಿದ್ದರಿಂದ ತನ್ನ ಗರ್ಭಿಣಿ ಪತ್ನಿಯನ್ನು ಗುಂಡಿಕ್ಕಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಜೌನ್‍ಪುರ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಸರ್ಪಥಾನ್ ಪ್ರದೇಶದ ಭಟೋಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನೇಹಾ (25) ಮೃತ ಗರ್ಭಿಣಿ. ಆರೋಪಿಯನ್ನು ದೀಪಕ್ ಸಿಂಗ್ ಎಂದು ಗುರುತಿಸಲಾಗಿದೆ. ದೀಪಕ್ ಪತ್ನಿಯನ್ನು ತನ್ನ 4 ವರ್ಷದ ಮಗನ ಮುಂದೆ ಕೊಂದ ನಂತರ ಸ್ಥಳದಿಂದ ಪರಾರಿಯಾಗಿದ್ದನು. ಆದರೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಮಹಾಮಾರಿ ಕೊರೊನಾವನ್ನು ತಡೆಯಲು ಕೇಂದ್ರ ಸರ್ಕಾರ ಇಡೀ ದೇಶಾದ್ಯಂತ ಲಾಕ್‍ಡೌನ್ ಘೋಷಣೆ ಮಾಡಲಾಗಿತ್ತು. ಆದರೆ 42 ದಿನಗಳ ನಂತರ ಮೇ 1 ರಂದು ಸರ್ಕಾರ ಕೆಲವು ನಿರ್ಬಂಧಗಳೊಂದಿಗೆ ರೆಡ್, ಗ್ರೀನ್ ಮತ್ತು ಆರೆಂಜ್ ವಲಯಗಳಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡಿತ್ತು. ಹೀಗಾಗಿ ಆರೋಪಿ ದೀಪಕ್ ತನ್ನ ಪತ್ನಿ ನೇಹಾಳನ್ನು ಮದ್ಯ ಖರೀದಿಸಲು ಹಣ ಕೊಡುವಂತೆ ಕೇಳಿದ್ದಾನೆ. ಆದರೆ ಪತ್ನಿ ಹಣ ಕೊಡಲು ನಿರಾಕರಿಸಿದ್ದಾಳೆ.

ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿ ಆರೋಪಿ ದೀಪಕ್ ಪಿಸ್ತೂಲಿನಿಂದ ಪತ್ನಿಗೆ ಮಗನ ಮುಂದೆಯೇ ಶೂಟ್ ಮಾಡಿದ್ದಾನೆ. ಆರೋಪಿ ಪತ್ನಿಯ ತಲೆಗೆ ಗುಂಡು ಹೊಡೆದಿದ್ದಾನೆ. ಈ ಘಟನೆಯಿಂದ ಹೆದರಿದ ಆರೋಪಿ ಮಗ ಮನೆಯಿಂದ ಓಡಿಹೋಗಿ ಪೊದೆಗಳಲ್ಲಿ ಅಡಗಿಕೊಂಡಿದ್ದಾನೆ. ಗುಂಡಿನ ಶಬ್ದ ಕೇಳಿದ ಸ್ಥಳೀಯ ನಿವಾಸಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ನಂತರ ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ತಿಳಿಸಿ, ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಷ್ಟರಲ್ಲಿ ನೇಹಾ ಮೃತಪಟ್ಟಿದ್ದಳು.

ಮಾಹಿತಿ ತಿಳಿದು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ನೇಹಾಳ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ರವಾನಿಸಿದ್ದಾರೆ. ನಂತರ ಆರೋಪಿಯ ಮಗನನ್ನು ನಾಲ್ಕು ಗಂಟೆಗಳ ನಂತರ ಪೊದೆಯಲ್ಲಿ ಪತ್ತೆ ಮಾಡಿದ್ದಾರೆ. ಆಗ ಬಾಲಕ ನಡೆದ ಘಟನೆಯ ಬಗ್ಗೆ ಪೊಲೀಸರಿಗೆ ವಿವರಿಸಿದ್ದಾನೆ. ಇತ್ತ ಪತ್ನಿಗೆ ಗುಂಡು ಹೊಡೆದ ನಂತರ ಆರೋಪಿ ಸಿಂಗ್ ಪರಾರಿಯಾಗಿದ್ದನು. ನಂತರ ಆತನಿಗಾಗಿ ಪೊಲೀಸರು ಶೋಧಕಾರ್ಯ ನಡೆಸಿ ಬಂಧಿಸಿದ್ದಾರೆ.

ನೇಹಾ ನಾಲ್ಕು ವರ್ಷಗಳ ಹಿಂದೆ ದೀಪಕ್ ಜೊತೆಗೆ ಮದುವೆಯಾಗಿದ್ದು, ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಳು. ಲಾಕ್‍ಡೌನ್ ಆಗುವ ಮೊದಲು ನೇಹಾ ತನ್ನ ಪತಿಯೊಂದಿಗೆ ದೆಹಲಿಯಲ್ಲಿ ವಾಸಿಸುತ್ತಿದ್ದಳು. ಸದ್ಯಕ್ಕೆ ಮೃತಳ ಸಹೋದರನ ನೀಡಿದ ದೂರಿನ ಆಧಾರದ ಮೇರೆಗೆ ದೀಪಕ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದರು.

 

Comments

Leave a Reply

Your email address will not be published. Required fields are marked *