ದೆಹಲಿ ಬಳಿಕ ಮಂಗ್ಳೂರಲ್ಲಿ ಭೀತಿ- ಗಾಳಿಯಲ್ಲಿ ಹೆಚ್ಚಾಗಿ ಬೆರೆತಿದ್ಯಂತೆ ಸೀಸದ ಅಂಶ..!

ಮಂಗಳೂರು: ಬೆಂಗಳೂರಿನ ನಂತರ ಅತಿ ಹೆಚ್ಚು ಮಾಲಿನ್ಯಕ್ಕೆ ತುತ್ತಾಗುತ್ತಿರೋ ನಗರವೆಂಬ ಕುಖ್ಯಾತಿ ಮಂಗಳೂರಿಗೆ ದಕ್ಕಿದೆ. ಆಂಟಿ ಪೊಲ್ಯುಶನ್ ಡ್ರೈವ್(ಎಪಿಡಿ) ಎಂಬ ಖಾಸಗಿ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಈ ವಿಚಾರ ಕಂಡುಬಂದಿದ್ದು ವಿಷಕಾರಿ ಸೀಸದ ಅಂಶ ಗಾಳಿಯಲ್ಲಿ ಸೇರಿಕೊಂಡಿದ್ದಾಗಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದೆ.

ಮಂಗಳೂರಿನ ಬಂಟ್ಸ್ ಹಾಸ್ಟೆಲ್, ಪಂಪ್ ವೆಲ್, ಲಾಲ್‍ಬಾಗ್, ಬೈಕಂಪಾಡಿ ಸೇರಿದಂತೆ ಹತ್ತಕ್ಕೂ ಹೆಚ್ಚು ಪ್ರದೇಶದಲ್ಲಿ ಅಧ್ಯಯನ ಕೈಗೊಳ್ಳಲಾಗಿತ್ತು. ಈ ವೇಳೆ ಗಾಳಿಯಲ್ಲಿ ವಿಷಕಾರಿ ಅಂಶಗಳು ಸೇರಿಕೊಂಡಿದ್ದನ್ನು ಪತ್ತೆ ಮಾಡಿದ್ದಾರೆ. ಸೀಸದ ಅಂಶಗಳ ಜೊತೆಗೆ ನೈಟ್ರೋಜನ್ ಡೈಆಕ್ಸೈಡ್, ಸಲ್ಫರ್ ಡೈ ಆಕ್ಸೈಡ್ ಕಣಗಳು ಗಾಳಿಯಲ್ಲಿ ಇರುವುದಾಗಿ ಪತ್ತೆಯಾಗಿದೆ. ಹೆಚ್ಚು ವಾಹನ ದಟ್ಟಣೆ ಇರುವ ಬಂಟ್ಸ್ ಹಾಸ್ಟೆಲ್, ಪಿವಿಎಸ್, ಲಾಲ್ ಬಾಗ್ ವೃತ್ತದಲ್ಲಿ ಗಾಳಿಯಲ್ಲಿ ವಿಷಕಾರಿ ಅಂಶಗಳು ಹೆಚ್ಚು ಇರುವುದಾಗಿ ವರದಿಯಲ್ಲಿ ಹೇಳಿದೆ.

ವಾಹನಗಳ ದಟ್ಟಣೆಯಿಂದ ವಾಯುಮಾಲಿನ್ಯ ಹೆಚ್ಚುತ್ತಿರುವ ಬಗ್ಗೆ ವರದಿಯಲ್ಲಿ ಹೇಳಲಾಗಿದ್ದು ಹೊಗೆಯ ಪರಿಣಾಮ ಹೆಚ್ಚು ಎದುರಿಸುವ ಟ್ರಾಫಿಕ್ ಪೊಲೀಸರು, ಆಟೋ ಚಾಲಕರು ಮತ್ತು ಬೀದಿ ವ್ಯಾಪಾರಿಗಳನ್ನು ಸರ್ವೆಗೆ ಒಳಪಡಿಸಿದ್ದಾರೆ. ಈ ಪೈಕಿ 40 ಶೇಕಡಾ ಮಂದಿ ಶ್ವಾಸಕೋಶದ ಸಮಸ್ಯೆ ಎದುರಿಸುತ್ತಿರುವ ಬಗ್ಗೆ ಕಂಡುಬಂದಿದೆ. ಹೀಗಾಗಿ ಈ ಬಗ್ಗೆ ಜಿಲ್ಲಾಡಳಿತ ಮತ್ತು ಸರ್ಕಾರ ಈಗಲೇ ಎಚ್ಚತ್ತುಕೊಂಡು ಮಾಲಿನ್ಯ ತಡೆಗಟ್ಟಲು ಕ್ರಮ ಕೈಗೊಳ್ಳಬೇಕು ಎಂದು ಸಂಸ್ಥೆಯ ಅಧ್ಯಕ್ಷ ಅಬ್ದುಲ್ಲಾ ರೆಹ್ಮಾನ್ ಹೇಳಿದ್ದಾರೆ.

ವಾಯು ಮಾಲಿನ್ಯದ ಕಾರಣ ದೆಹಲಿ, ಬೆಂಗಳೂರು ನಗರಗಳು ಗಂಭೀರ ಪರಿಣಾಮ ಎದುರಿಸುತ್ತಿರುವ ಮಧ್ಯೆ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿರುವ ಮಂಗಳೂರಿಗೂ ಗಂಡಾಂತರ ಎದುರಾಗಿರುವುದು ಹೊಸ ಬೆಳವಣಿಗೆಯಾಗಿದ್ದು ಆತಂಕದ ಛಾಯೆ ಮೂಡಿಸಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *