ಏರ್ ಇಂಡಿಯಾ ಫ್ಲೈಟ್‍ನಲ್ಲಿ ಎಸಿ ಸಮಸ್ಯೆ- ಪ್ರಯಾಣಿಕರು ಗಾಳಿ ಬೀಸಿಕೊಳ್ತಿರೋ ವಿಡಿಯೋ ವೈರಲ್

ನವದೆಹಲಿ: ಏರ್ ಇಂಡಿಯಾ ವಿಮಾನದಲ್ಲಿ ಎಸಿ ಸಮಸ್ಯೆಯಿಂದಾಗಿ ಪ್ರಯಾಣಿಕರು ಉಸಿರಾಟದ ಸಮಸ್ಯೆ ಎದುರಿಸಿದ್ದು, ವಿಪರೀತ ಸೆಕೆ ತಾಳಲಾರದೆ ತಮ್ಮ ಕೈಯಲ್ಲಿದ್ದ ಕರಪತ್ರ ಅಥವಾ ಮ್ಯಾಗಜಿನ್‍ಗಳಲ್ಲಿ ಗಾಳಿ ಬೀಸಿಕೊಳ್ಳುತ್ತಿರುವ ವಿಡಿಯೋವೊಂದು ಇದೀಗ ವೈರಲ್ ಆಗಿದೆ.

ಭಾನುವಾರ ಮಧ್ಯಾಹ್ನ 1.55ರ ವೇಳೆಗೆ ಏರ್ ಇಂಡಿಯಾ ಎಐ-880 ವಿಮಾನ ಪಶ್ಚಿಮ ಬಂಗಾಳದ ಬಾಗ್ದೋರಾದಿಂದ 168 ಪ್ರಯಾಣಿಕರನ್ನು ಹೊತ್ತು ನವದೆಹಲಿಗೆ ಹೊರಟಿತ್ತು. ವಿಮಾನ ಟೇಕ್ ಆಫ್ ಆದ 20 ನಿಮಿಷದಲ್ಲೇ ಎಸಿ ಕೆಲಸ ಮಾಡುತ್ತಿಲ್ಲ ಎಂದು ಪ್ರಯಾಣಿಕರು ದೂರು ನೀಡಿದ್ದರು. ಕೆಲವು ಪ್ರಯಾಣಿಕರು ಆಕ್ಸಿಜನ್ ಮಾಸ್ಕ್ ಹಾಕಿಕೊಂಡ್ರೂ ಅದೂ ಕೂಡ ಕೆಲಸ ಮಾಡುತ್ತಿರಲಿಲ್ಲ ಎಂದು ವರದಿಯಾಗಿದೆ.

ಪ್ರಯಾಣಿಕರು ವಿಮಾನದ ಸಿಬ್ಬಂದಿಗೆ ಎಸಿ ಕಾರ್ಯ ನಿರ್ವಹಿಸದ ಬಗ್ಗೆ ದೂರು ನೀಡಿದ್ದರು. ಸ್ವಲ್ಪ ಸಮಯದಲ್ಲೇ ಎಸಿಯನ್ನ ಸರಿ ಮಾಡಲಾಗುತ್ತದೆ ಎಂದು ಸಿಬ್ಬಂದಿ ಭರವಸೆ ನೀಡಿದ್ದರು. ಆದ್ರೆ ಸಮಸ್ಯೆ ಮಾತ್ರ ಬಗೆಹರಿದಿರಲಿಲ್ಲ.

ಘಟನೆಯಿಂದ ಸಿಟ್ಟಿಗೆದ್ದ ಪ್ರಯಾಣಿಕರೊಬ್ಬರು ವಿಮಾನದಲ್ಲಿ ಪ್ರಯಾಣಿಕರು ತಮ್ಮ ಕರವಸ್ತ್ರಗಳಲ್ಲಿ ಗಾಳಿ ಬೀಸಿಕೊಳ್ಳುತ್ತಿರುವುದನ್ನು ವಿಡಿಯೋ ಮಾಡಿದ್ದಾರೆ. ಕೆಲ ಪ್ರಯಾಣಿಕರು ವಿಮಾನದಲ್ಲಿ ಎದುರಿಸಿದ ತೊಂದರೆಯ ಬಗ್ಗೆ ಟ್ವಿಟ್ಟರ್‍ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಏರ್ ಇಂಡಿಯಾವನ್ನ ಸಂಪರ್ಕಿಸಿದಾಗ, ತಾಂತ್ರಿಕ ಸಮಸ್ಯೆಯಿಂದ ಹೀಗಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *