ಅಸ್ಸಾಂ | ಹಠಾತ್‌ ಆಗಿ ಹೆಚ್ಚಿದ ಪ್ರವಾಹ – ಸಂಕಷ್ಟದಲ್ಲಿ  ಸಿಲುಕಿದ್ದ 14 ಮಂದಿಯನ್ನು ರಕ್ಷಿಸಿದ ವಾಯುಪಡೆ

ದಿಸ್ಪುರ್‌: ಅಸ್ಸಾಂ (Assam) ಹಾಗೂ ಅರುಣಾಚಲ ಪ್ರದೇಶದ (Arunachal Pradesh) ಗಡಿಯ ಬೊಮ್ಜಿರ್ ನದಿಯಲ್ಲಿ ಸಿಲುಕಿದ್ದ 14 ಜನರನ್ನು ವಾಯುಪಡೆ ರಕ್ಷಿಸಿದೆ.

ಟಿನ್ಸುಕಿಯಾ ಜಿಲ್ಲಾ ಆಯುಕ್ತ ಸ್ವಪ್ನೀಲ್ ಪಾಲ್ ಅವರು 14 ಮಂದಿ ಸಿಲುಕಿದ್ದ ಬಗ್ಗೆ ವಾಯುಪಡೆಗೆ ಮಾಹಿತಿ ನೀಡಿ ರಕ್ಷಿಸುವಂತೆ ಮನವಿ ಮಾಡಿದ್ದರು. ತಕ್ಷಣ ಕಾರ್ಯಪೃವೃತ್ತರಾದ ವಾಯುಪಡೆಯ ಅಧಿಕಾರಿಗಳು ಸ್ಥಳಕ್ಕೆ ಹೆಲಿಕಾಪ್ಟರ್‌ ಕಳುಹಿಸಿ, ಸಂಕಷ್ಟದಲ್ಲಿ ಸಿಲುಕಿದ್ದ ಎಲ್ಲರನ್ನೂ ಕಾಪಾಡಿದ್ದಾರೆ.

ಈ ಪ್ರದೇಶದಲ್ಲಿ ನಿರಂತರ ಮಳೆಯಿಂದಾಗಿ ನದಿಯ ನೀರಿನ ಮಟ್ಟ ಹಠಾತ್‌ ಆಗಿ ಏರಿಕೆಯಾಗಿದೆ. ಪರಿಣಾಮ 14 ಮಂದಿ ಸಿಕ್ಕಿಬಿದ್ದಿದ್ದರು. ಎಲ್ಲರನ್ನೂ ಸುರಕ್ಷಿತವಾಗಿ ಮನೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮನವಿಯನ್ನು ಪರಿಗಣಿಸಿ ಜನರ ರಕ್ಷಣೆಗೆ ಧಾವಿಸಿದ ವಾಯುಪಡೆಗೆ ಸ್ವಪ್ನೀಲ್ ಪಾಲ್ ಧನ್ಯವಾದ ಅರ್ಪಿಸಿದ್ದಾರೆ.